ಕಾರವಾರ (ಉ.ಕ): ಸರ್ಕಾರ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಹಣ ಬಿಡುಗಡೆ ಮಾಡಿದ್ದರೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬೀಳುತ್ತವೆ. ಇದಕ್ಕೆ ನಿದರ್ಶನ ಎನ್ನುವಂತೆ ಉತ್ತರಕನ್ನಡ ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರಕ್ಕೆ ಸರ್ಕಾರ ಹಣ ಬಿಡುಗಡೆಗೊಳಿಸಿದ್ದರೂ ಜನಪ್ರತಿನಿಧಿಗಳ ಕಚ್ಚಾಟದಿಂದಾಗಿ ಅಭಿವೃದ್ಧಿಯಾಗದೆ ಉಳಿದಿದೆ.
ರಾಜ್ಯದಲ್ಲೆಲ್ಲೂ ಕಾಣಸಿಗದ ಕಪ್ಪು ಮರಳಿನ ತೀಳ್‌ಮಾತಿ ಬೀಚ್ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿದ್ದು, ವಿಶಿಷ್ಟ ಕಡಲತೀರವಾಗಿದೆ. ಆದ್ರೆ ಈ ಕಡಲತೀರಕ್ಕೆ ತೆರಳಲು ಸೂಕ್ತ ರಸ್ತೆ ಮಾರ್ಗದ ವ್ಯವಸ್ಥೆ ಇಲ್ಲದ ಹಿನ್ನಲೆ ಈ ಹಿಂದೆ 2014ರಲ್ಲಿ ಪ್ರವಾಸೋದ್ಯಮ ಇಲಾಖೆ 5 ಕೋಟಿ ರೂ. ವೆಚ್ಚದಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಅನುದಾನ ಬಿಡುಗಡೆಗೊಳಿಸಿತ್ತು. ಆದರೆ ಬಿಡುಗಡೆಯಾದ ಅನುದಾನ ಬಳಕೆಯಾಗದೇ ಉಳಿದಿದೆ.
ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್‌ನ ಸತೀಶ್ ಸೈಲ್ ಶಾಸಕರಾಗಿದ್ದು, ಇದಾದ ಬಳಿಕ 2018ರಲ್ಲಿ ಬಿಜೆಪಿಯ ರೂಪಾಲಿ ನಾಯ್ಕ ಶಾಸಕಿಯಾಗಿ ಆಯ್ಕೆಯಾಗಿದ್ದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಒಮ್ಮೆ ಹಣ ವಾಪಸ್ ಆಗಿದ್ದು ಇದಾದ ಬಳಿಕ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಸರ್ಕಾರ ಬದಲಾದ ಹಿನ್ನೆಲೆ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಆದರೆ, ಹಾಲಿ ಶಾಸಕಿ ರೂಪಾಲಿ ನಾಯ್ಕ ಉದ್ದೇಶ ಪೂರ್ವಕವಾಗಿಯೇ ತೀಳ್‌ಮಾತಿ ಕಡಲತೀರವನ್ನು ಅಭಿವೃದ್ಧಿಪಡಿಸುತ್ತಿಲ್ಲ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದ್ದರು.
ನಿರ್ಮಾಣವಾಗದ ತೂಗು ಸೇತುವೆ
ಹಿಂದೆ ತೀಳ್‌ಮಾತಿ ಬೀಚ್‌ಗೆ ಮಂಜೂರಾಗಿದ್ದ ಅನುದಾನ ವಾಪಸಾದ ಬಳಿಕ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಕಡಲತೀರಕ್ಕೆ ತೂಗುಸೇತುವೆ ನಿರ್ಮಿಸಲು 1.20 ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಅಷ್ಟರಲ್ಲಿ ಸರ್ಕಾರವೇ ಬದಲಾಗಿದ್ದು, ಅದಾದ ಬಳಿಕ ತೀಳ್‌ಮಾತಿ ಕಡಲತೀರಕ್ಕೆ ಸೇತುವೆ ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿತ್ತು.
ಮಾಜಿ ಶಾಸಕ ಸತೀಶ್ ಸೈಲ್ ತಮ್ಮ ಅವಧಿಯಲ್ಲಿ ಪೂರ್ಣಗೊಳಿಸಲಾಗದ ಯೋಜನೆಗಳಿಗೆ ನಾನು ಕಾರಣೀಕರ್ತೆ ಎನ್ನುವಂತೆ ಬಿಂಬಿಸುತ್ತಿದ್ದು, ಇದನ್ನ ಬಿಡಬೇಕು ಅಂತಾ ಶಾಸಕಿ ರೂಪಾಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ತೀಳ್‌ಮಾತಿ ಕಡಲತೀರ ಗೋವಾ ಗಡಿಗೆ ಹತ್ತಿರದಲ್ಲಿದ್ದು, ಗೋವಾ ರಾಜ್ಯ ಈ ಕಡಲತೀರವನ್ನ ತನ್ನದು ಎಂದು ಹೇಳಿಕೊಳ್ಳುತ್ತಿದೆ.
ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಕೆಸರೆರಚಾಟದಿಂದಾಗಿ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿದ್ದು, ಇನ್ನಾದರೂ ಅಭಿವೃದ್ಧಿ ಕಾರ್ಯಗಳೆಂದು ಬಂದಾಗ ತಮ್ಮ ಪ್ರತಿಷ್ಠೆ ಬದಿಗಿಟ್ಟು ಕ್ಷೇತ್ರಕ್ಕಾಗಿ ದುಡಿಯಲಿ ಎಂಬುದು ಸ್ಥಳೀಯರ ಆಶಯವಾಗಿದೆ.