ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಾದ ಶಿರಸಿ, ಸಿದ್ದಾಪುರದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹಲವೆಡೆ ಭೂಮಿ ಬಿರುಕು ಬಿಟ್ಟು, ಬೃಹತ್ ಗುಡ್ಡಗಳು ಕುಸಿದಿವೆ.
ಶಿರಸಿ ತಾಲೂಕಿನ ಇಸಳೂರು ಗ್ರಾಮದ ಬಾಬನಕಟ್ಟಾ ಸರ್ವೆ ನಂಬರ್ 38/1ರಲ್ಲಿ ಗುಡ್ಡ ಕುಸಿದಿದೆ. ಗುಡ್ಡದಲ್ಲಿ ಬೆಳೆದಿದ್ದ ಅಡಿಕೆ ತೋಟಕ್ಕೆ ಹಾನಿಯಾಗಿದ್ದು, ಭಾರೀ ನಷ್ಟವಾಗಿದೆ. ಇದು ಮಾಜಿ ಸೈನಿಕ ಪ್ರದೀಪ ಹೆಗಡೆ ಅವರಿಗೆ ಸೇರಿದ ತೋಟವಾಗಿದೆ. ಇವರು ಸೇವೆಯಿಂದ ನಿವೃತ್ತರಾದ ಬಳಿಕ ಸರ್ಕಾರ ನೀಡಿದ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದರು. ಕಳೆದ ವರ್ಷವೂ ಸ್ವಲ್ಪ ಭೂ ಕುಸಿತವಾಗಿತ್ತು. ಆದರೆ, ಈ ವರ್ಷ ಸಂಭವಿಸಿರುವ ಭೂ ಕುಸಿತಕ್ಕೆ ಅಡಿಕೆ, ತೆಂಗಿನ ಮರಗಳು ನೆಲಕ್ಕುರುಳಿವೆ. ಅಷ್ಟೇ ಅಲ್ಲದೇ, ಗುಡ್ಡದ ಮೇಲೆ ಇವರ ಮನೆ ಇದ್ದು, ಆತಂಕ ದುಪ್ಪಟ್ಟಾಗಿದೆ.
ಅದೇ ರೀತಿ ಸಿದ್ದಾಪುರದ ಗುಂಜಗೋಡು, ಬಾನಕುಳಿ ಭಾಗದಲ್ಲೂ ಭೂಮಿ ಬಿರುಕು ಬಿಟ್ಟಿದ್ದು, ಬೃಹತ್ ಮರಗಳು ನೆಲಕ್ಕುರುಳಿವೆ. ಸದ್ಯ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಆದಷ್ಟು ಬೇಗ ಸರ್ಕಾರ ನಿಗಾವಹಿಸಿ ಭೂಗೋಳ ತಜ್ಞರಿಂದ ಸ್ಥಳ ಪರಿಶೀಲನೆ ನಡೆಸಬೇಕು. ಜೊತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.