ಕಾರವಾರ: ಬ್ರಿಟಿಷ್ ಏರ್ಲೈನ್ಸ್ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಪ್ರೇಮಿಗಳಿಬ್ಬರು 54 ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾರವಾರ ತಾಲೂಕಿನ ಶಿರವಾಡದ ಮೊರ್ವಿನ್ ಥಾಮಸ್ ಡಿಸೋಜಾ ಮತ್ತು ಈತನ ಪ್ರೇಯಸಿ ಎನ್ನಲಾದ ಯಲ್ಲಾಪುರ ಮೂಲದ ಯುವತಿಯೋರ್ವಳು ತಮಗೆ ಸುಮಾರು 70 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ 10ಕ್ಕೂ ಹೆಚ್ಚು ಯುವಕರು ಇಂದು ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ಇಬ್ಬರು ಆರೋಪಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರಿನಲ್ಲಿದ್ದ ಮೊರ್ವಿನ್, ಬ್ರಿಟಿಷ್ ಏರ್ಲೈನ್ಸ್ ಕಂಪನಿಯಲ್ಲಿ ಗ್ರೌಂಡ್ ಸ್ಟಾಫ್ ಉದ್ಯೋಗ ಕೊಡಿಸುವುದಾಗಿ ಮೊದಲು ತನ್ನದೆ ಸ್ನೇಹಿತರಿಗೆ ನಂಬಿಸಿದ್ದ. ಅದರಂತೆ ಪ್ರತಿಯೊಬ್ಬರಿಂದ ಸೆಕ್ಯೂರಿಟಿ ಡೆಪಾಸಿಟ್ ಎಂದು ಹೇಳಿ 1 ಲಕ್ಷದಿಂದ 2.5 ಲಕ್ಷದವರೆಗೂ ಪಡೆದುಕೊಂಡಿದ್ದಾನೆ. ಬಳಿಕ ಅವರಿಗೆ ಬ್ರಿಟಿಷ್ ಏರ್ಲೈನ್ಸ್ ಕಂಪನಿ ಹೆಸರಿನ ಸಮವಸ್ತ್ರ, ಗುರುತಿನ ಚೀಟಿ, ಆಫರ್ ಲೆಟರ್ಗಳನ್ನು ನಕಲಿಯಾಗಿ ತಯಾರಿಸಿ ನೀಡಿದ್ದಾನೆ. ಇದನ್ನು ನಂಬಿ ಹಣ ನೀಡಿದವರು ಇನ್ನೊಂದಿಷ್ಟು ಸ್ನೇಹಿತರಿಗೆ ತಿಳಿಸಿದ್ದು, ಅವರು ಕೂಡ ಮುಂದೆ ಬಂದು ಲಕ್ಷಾಂತರ ರೂಪಾಯಿ ಹಣವನ್ನು ನೀಡಿ ಮೋಸ ಹೋಗಿದ್ದಾರೆ. ಬಳಿಕ ಈತ ಬೆಂಗಳೂರಿನಲ್ಲಿ ಬ್ರಿಟಿಷ್ ಏರ್ಲೈನ್ಸ್ ಹೆಸರಿನಲ್ಲಿ ಕಚೇರಿಯೊಂದನ್ನು ತೆರೆದಿದ್ದು, ಎಲ್ಲರಿಗೂ ಅಲ್ಲಿ ಟ್ರೈನಿಂಗ್ ನೀಡುವುದಾಗಿ ನಂಬಿಸಿದ್ದ. ಅದಕ್ಕೆ ಈತ ಝರಾ ಖಾನ್ ಎನ್ನುವ ಯುವತಿಯನ್ನು ಮಾನವ ಸಂಪನ್ಮೂಲ ವ್ಯಕ್ತಿ ಎಂದು ಪರಿಚಯಿಸಿ ಅವಳಿಂದ ಟ್ರೈನಿಂಗ್ ಸಹ ನೀಡಿದ್ದ.
ಬಳಿಕ ಕೆಲವರಿಗೆ ನಂಬಿಕೆ ಬರಲಿ ಎಂದು ಕಂಪನಿ ಹೆಸರಿನಲ್ಲಿ ಮೊಬೈಲ್ ಗೆ ಎಸ್ಎಂಎಸ್ ಸಂದೇಶವನ್ನು ಕಳುಹಿಸಿ 20 ಸಾವಿರ ಹಣವನ್ನು ಸಂದಾಯ ಮಾಡಿದ್ದ. ಇನ್ನು ಕೆಲವರಿಗೆ ತಿಂಗಳಿಗೆ ಎರಡು ಬಾರಿ ವಿಮಾನದಲ್ಲಿ ತೆರಳಬಹುದು ಎಂದು ಟಿಕೆಟ್ ಕೂಡ ಕೊಟ್ಟು ನಂಬಿಸಿದ್ದ ಎಂದು ಮೊಸ ಹೋದವರು ದೂರಿದ್ದಾರೆ. ಆದರೆ, ಕಳೆದ ಐದಾರು ತಿಂಗಳಿಂದ ಕೆಲಸದ ವಿಚಾರವನ್ನೆ ಎತ್ತದಿದ್ದಾಗ ಅನುಮಾನಗೊಂಡವರು ಮೊರ್ವಿನ್ನನ್ನು ಪ್ರಶ್ನಿಸಿದಾಗ ಸೆಪ್ಟೆಂಬರ್ 12ರಂದು ಕಂಪನಿಯ ಸಮವಸ್ತ್ರ ಹಾಗೂ ಆಫರ್ ಲೆಟರ್ ತೆಗೆದುಕೊಂಡು ಬೆಂಗಳೂರು ಏರ್ಪೋರ್ಟ್ ಗೆ ಬರಲು ತಿಳಿಸಿದ್ದಾನೆ. ಅದರಂತೆ ಅಂದು ತೆರಳಿದಾಗ ಅಲ್ಲಿನ ಸಿಬ್ಬಂದಿ ನಮ್ಮನ್ನು ಒಳಗೆ ಬಿಡದೆ ಮೋಸವಾಗಿರುವ ಬಗ್ಗೆ ತಿಳಿಸಿದ್ದರು. ಬಳಿಕ ಆರೋಪಿಗೆ ಪೋನ್ ಮಾಡಿದರೇ ಸ್ವಿಚ್ ಆಫ್ ಬರುತ್ತಿದ್ದು, ಆತನಿಗಾಗಿ ಹುಡುಕಾಟ ನಡೆಸಿದಾಗ ಬೆಂಗಳೂರಿನಲ್ಲಿ ಬಾಡಿಗೆಗಿದ್ದ ಮನೆಯನ್ನು ಖಾಲಿ ಮಾಡಿ ತಲೆಮರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ ಎನ್ನುತ್ತಾರೆ ಮೋಸ ಹೋದವರು.
ಆದರೆ, ಮಾನವ ಸಂಪನ್ಮೂಲ ವ್ಯಕ್ತಿ ಎಂದು ಬಂದ ಯುವತಿ ಈತನ ಪ್ರೇಯಸಿ ಎಂದು ಬಳಿಕ ಗೊತ್ತಾಗಿದೆ. ಅದು ಕೂಡ ಯಲ್ಲಾಪುರ ಮೂಲದವಳು. ಕೊನೆಗೆ ಈತನ ತಂದೆಯ ಪೋನ್ ನಂಬರ್ ಪಡೆದು ಸಂಪರ್ಕಿಸಿದಾಗ ಹಣ ಕೊಡುವುದಾಗಿ ಕಾರವಾರಕ್ಕೆ ಕರೆಸಿದ್ದರು. ಯಾವುದೇ ಪ್ರಕರಣ ದಾಖಲಿಸದಂತೆ ಮನವಿ ಮಾಡಿದ್ದರು. ಇದೀಗ ಕೇಳಿದರೆ ಅವನ್ನು ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎನ್ನುತ್ತಿದ್ದಾರೆ. ನಾವು ಕಷ್ಟಪಟ್ಟು ಸಂಗ್ರಹಿಸಿದ ಹಣ ಅದು. ಮೊರ್ವಿನ್ ಮತ್ತು ಆತನ ಪ್ರೇಯಸಿ ತಮಗೆ ಮೋಸ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸ್ ದೂರು ದಾಖಲಿಸಿದ್ದು, ಇಬ್ಬರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಪೊಲೀಸರು ಭರವಸೆ ನೀಡಿದ್ದಾರೆ ಎನ್ನುತ್ತಾರೆ ಹಣ ಕಳೆದುಕೊಂಡ ಹಾಸನ ಮೂಲದ ನಾಗೇಶ.