ಕಾರವಾರ: ಆಟೋದಲ್ಲಿ ತೆರಳುತ್ತಿರುವಾಗ ಏಕಾಏಕಿ ಪ್ರಸವವೇದನೆ ಕಾಣಿಸಿಕೊಂಡ ಗರ್ಭಿಣಿಗೆ ಸಮುದಾಯ ಆರೋಗ್ಯಾಧಿಕಾರಿಯೋರ್ವರು ರಸ್ತೆ ಪಕ್ಕದ ಮನೆಯಲ್ಲಿಯೇ ಹೆರಿಗೆ ಮಾಡಿಸಿ, ಸಮಯಪ್ರಜ್ಞೆ ಮೆರೆದಿದ್ದಾರೆ. ಆರೋಗ್ಯಾಧಿಕಾರಿಯ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಅಂಕೋಲಾ ತಾಲೂಕಿನ ಹೊನೈಬೈಲ್ ಗ್ರಾಮದ ಗರ್ಭಿಣಿ ಕಲಾವತಿ ಗುನಗಾ ಎನ್ನುವವರು ಸಹಜವಾದ ಪರೀಕ್ಷೆಗೆಂದು ತಾಲೂಕು ಆಸ್ಪತ್ರೆಗೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಅವರಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿತು. ಆಕಸ್ಮಿಕವಾಗಿ ನಡೆದ ಘಟನೆಯಿಂದ ಗರ್ಭಿಣಿಯನ್ನು ದೂರದ ತಾಲೂಕು ಆಸ್ಪತ್ರೆಗೆ ಸಾಗಿಸುವುದು ಕಷ್ಟಕರವಾದ ಸಂಗತಿಯಾಗಿತ್ತು. ಹೀಗಾಗಿ ಗರ್ಭಿಣಿಯೊಂದಿಗೆ ಇದ್ದವರಿಗೆ ಹಾಗೂ ಆಟೋ ಚಾಲಕನಿಗೆ ಮುಂದೇನು ಮಾಡಬೇಕೆಂದು ದಾರಿ ತೋರದಂತಾಗಿತ್ತು.
ಕೂಡಲೇ ಎಚ್ಚೆತ್ತುಕೊಂಡ ಅಲ್ಲಿನ ಗ್ರಾಮಸ್ಥರು ಸಮುದಾಯ ಆರೋಗ್ಯಾಧಿಕಾರಿ ಗಣೇಶ ನಾಯ್ಕ ಅವರನ್ನು ದೂರವಾಣಿಯೊಂದಿಗೆ ಸಂಪರ್ಕಿಸಿ ನಡೆದ ವಿಷಯವನ್ನು ತಿಳಿಸಿದ್ದರು. ದೂರದ ಆಸ್ಪತ್ರೆಗೆ ಸಾಗಿಸುವಷ್ಟರೊಳಗೆ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯವಾಗಬಹುದು ಎಂಬುದನ್ನು ಗಣೇಶ ನಾಯ್ಕ ಅರಿತಿದ್ದರು.
ಹೀಗಾಗಿ ಗರ್ಭಿಣಿಯನ್ನು ಆಟೋದಿಂದ ಇಳಿಸಿ ರಸ್ತೆ ಪಕ್ಕದ ಸುಕ್ರಿ ಗೌಡ ಎಂಬವರ ಮನೆಯಲ್ಲಿ ಉಪಚರಿಸುವುದರೊಂದಿಗೆ ಸುಸೂತ್ರ ಹೆರಿಗೆಯನ್ನು ಮಾಡಿಸಲು ಸಹಕರಿಸಿದ್ದಾರೆ. ನಂತರ ಆಂಬ್ಯುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಆರೋಗ್ಯಪೂರ್ಣ ಹೆರಿಗೆಯಲ್ಲಿ ಸಮಯಪ್ರಜ್ಞೆ ಮೆರೆದ ಸಮುದಾಯ ಆರೋಗ್ಯಾಧಿಕಾರಿ ಗಣೇಶ ನಾಯ್ಕರ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ: ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಇತ್ತೀಚಿನ ಘಟನೆ: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಾರ್ಗ ಮಧ್ಯದಲ್ಲಿಯೇ ಬಸ್ಸಿನ ಮಹಿಳಾ ನಿರ್ವಾಹಕಿಯು ಮಹಿಳೆಗೆ ಹೆರಿಗೆ ಮಾಡಿಸಿದ್ದ ಘಟನೆ ಇತ್ತೀಚೆಗೆ ಚನ್ನರಾಯಪಟ್ಟಣ - ಹಾಸನ ಮಾರ್ಗಮಧ್ಯೆ ನಡೆದಿತ್ತು. ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಓರ್ವ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬಸ್ ಸಾಗುವ ಮಾರ್ಗದಲ್ಲಿ ಹತ್ತಾರು ಕಿಲೋಮೀಟರ್ ದೂರದಲ್ಲಿ ಯಾವುದೇ ಆಸ್ಪತ್ರೆಗಳು ಇರಲಿಲ್ಲ. ಹೀಗಾಗಿ ಬಸ್ಸಿನಲ್ಲಿದ್ದ ಮಹಿಳಾ ಕಂಡಕ್ಟರ್ ವಾಹನವನ್ನು ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆರಿಗೆ ಮಾಡಿಸಿದ್ದರು.
ಕಳೆದ ಫೆಬ್ರವರಿ ತಿಂಗಳ ವೇಳೆ ಚಿಕ್ಕಮಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಕಳಸ ತಾಲೂಕಿನ ಹಳುವಳ್ಳಿ ಗ್ರಾಮದ ಶರಣ್ಯ ಎಂಬ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಆಂಬ್ಯುಲೆನ್ಸ್ ಕೆಟ್ಟು ನಿಂತಿತ್ತು. ಬಳಿಕ ದುರಸ್ತಿ ಮಾಡಿಕೊಂಡು ಹೊರಟರೆ ಸ್ವಲ್ಪ ದೂರದಲ್ಲಿ ತಾಂತ್ರಿಕ ದೋಷದಿಂದ ಆಂಬ್ಯುಲೆನ್ಸ್ ಮತ್ತೆ ನಿಂತಿತ್ತು. ಈ ಮಧ್ಯೆ ರಸ್ತೆಯಲ್ಲಿನ ಗುಂಡಿಗೆ ಇಳಿದ ಆಂಬ್ಯುಲೆನ್ಸ್, ಪಂಚರ್ ಕೂಡ ಆಗಿತ್ತು. ಹೀಗೆ ಎರಡ್ಮೂರು ಬಾರಿ ಕೆಟ್ಟು ನಿಂತ ಆಂಬ್ಯುಲೆನ್ಸ್ ದುರಸ್ತಿಯಾಗುವಷ್ಟರಲ್ಲಿ ಸುಮಾರು 2 ಗಂಟೆಗಳೇ ಕಳೆದಿತ್ತು. ಇದರಿಂದಾಗಿ ತೀವ್ರ ಅಸ್ವಸ್ಥರಾದ ಶರಣ್ಯಳನ್ನು ಕಂಡು ಸ್ಥಳೀಯರು ಬಾಳೆಹೊನ್ನೂರಿಗೆ ಫೋನ್ ಮಾಡಿ ಬೇರೊಂದು ಆಂಬ್ಯುಲೆನ್ಸ್ ಕರೆಸಿದ್ದರು. ನಂತರ ಗರ್ಭಿಣಿಯನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಕೊಪ್ಪ ಆಸ್ಪತ್ರೆಗೆ ದಾಖಲಾದ ಶರಣ್ಯ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಇದನ್ನೂ ಓದಿ: ಬಳ್ಳಾರಿ ಕೊರ್ಲಗುಂದಿ ಮತಗಟ್ಟೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ.. ಕಾಲಿನಿಂದ ಮತ ಚಲಾಯಿಸಿದ ವಿಶೇಷಚೇತನ