ಕಾರವಾರ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಗ್ರಾಮ, ಪಟ್ಟಣ ಮತ್ತು ತಾಲೂಕುಮಟ್ಟದ ಸ್ಥಳೀಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಸಹಾಯಕ ಆಯುಕ್ತರು ಹಾಗೂ ತಾಲೂಕು ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಕೊರೊನಾ ವೈರಸ್ ತಡೆ ಕುರಿತು ಕೈಗೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನೆ ಬಗ್ಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಲಾಕ್ಡೌನ್ ನಿಯಮವನ್ನು ಎಲ್ಲಾ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಿದ್ದಾರೆ. ಮುಂದಿನ ಅವಧಿಗೂ ಇದು ಮುಂದುವರಿಯಬೇಕು. ಇದಕ್ಕೆ ಸರಿಯಾದ ಕಾರ್ಯ ಯೋಜನೆಗಳನ್ನು ಈಗಿನಿಂದಲೇ ರೂಪಿಸಿಕೊಂಡು ಆಯಾ ಸ್ಥಳೀಯ ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲೇ ಇದ್ದು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ., ಗ್ರಾಮ ಮಟ್ಟದ ಆರೋಗ್ಯ ತಂಡಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಬೇಕು. ಆಶಾ ಕಾರ್ಯಕರ್ತೆಯರು ಫೋನ್ ಕರೆ ಮಾಡುವ ಮೂಲಕ ಮಾಹಿತಿ ಸಂಗ್ರಹಿಸಬೇಕು. ಆರೋಗ್ಯ ತಪಾಸಣೆಯನ್ನು ಪುನಃ ಮಾಡಿ, ಸಲಹೆ ಸೂಚನೆಗಳಿದ್ದರೆ ಸಂಬಂಧಿಸಿದವರಿಂದ ಕೇಳಿ ಸ್ಥಳೀಯವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಮುಂದಿನ ಹದಿನೈದು ದಿನಗಳಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರನ್ನು ಚೆಕ್ ಪೋಸ್ಟ್ಗಳಲ್ಲಿ ತಡೆ ಹಿಡಿಯಿರಿ. ಒಂದು ವೇಳೆ ಜನರು ಬಂದಿದ್ದೇ ಆದಲ್ಲಿ ಅವರಿಗೆ ಪರ್ಯಾಯ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ತಹಶೀಲ್ದಾರರು ಸಹಕಾರ ನೀಡಿ ರೆಡ್, ಆರೇಂಜ್ ಮತ್ತು ಗ್ರೀನ್ ಝೋನ್‍ಗಳೆಂದು ಸ್ಥಳಗಳನ್ನು ಗುರುತಿಸಿ ಸಮೀಕ್ಷೆ ಮಾಡಿಕೊಳ್ಳಬೇಕು ಎಂದಿದ್ದಾರೆ.