ಶಿರಸಿ: ಸದಾ ತಂಪಿನಿಂದ ಕೂಡಿರುತ್ತಿದ್ದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನೀರಿನ ಕೊರತೆ ಕಾಣಿಸಿಕೊಳ್ಳುತ್ತಿದೆ. ಬಾವಿಯಲ್ಲಿ ನೀರು ಪಾತಾಳ ಸೇರಿದ್ದು, ಮೇಲೇಳುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕುಡಿಯುವ ನೀರಿಗಾಗಿ ಸ್ಥಳೀಯರು ಪರಿತಪಿಸುತ್ತಿದ್ದಾರೆ.
ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಅರೆಂದೂರು ಹಾಗೂ ಸುತ್ತಲಿನ ಗ್ರಾಮಗಳು ಮಳೆಗಾಲದಲ್ಲಿ ನೆರೆಯಿಂದ ಈ ಹಿಂದೆ ಬೆಳೆ ಕಳೆದುಕೊಂಡಿದ್ದರು. ಈಗ ಬೇಸಿಗೆಯಲ್ಲಿ ಬಿತ್ತಿದೆ ಬೆಳೆ ನೀರಿಲ್ಲದೆ ಬಾಡುತ್ತಿದೆ. ಜೊತೆಗೆ ಗ್ರಾಮಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ.
ಸಿದ್ದಾಪುರಕ್ಕೆ ನೀರು ಒದಗಿಸುವ ಅರೆಂದೂರು ಹೊಳೆ ಸಹ ಬತ್ತಿ ಹೋಗಿದೆ. ಹೊಳೆ ಸುತ್ತಲಿನ ಗ್ರಾಮಸ್ಥರು ಟ್ಯಾಂಕರ್ ನೀರನ್ನೇ ಅವಲಂಬಿಸುವ ಪರಿಸ್ಥಿತಿ ಬಂದಿದೆ. ಈ ಭಾಗದಲ್ಲಿ ಸಾರ್ವಜನಿಕ ಬಾವಿಗಳಿಲ್ಲ. ಮನೆಯವರು ತಮ್ಮ ಖರ್ಚಿನಿಂದ ನಿರ್ಮಿಸಿಕೊಂಡಿದ್ದ ಬಾವಿಗಳಲ್ಲಿ ಸಾಕಷ್ಟು ನೀರು ಲಭ್ಯವಾಗುತ್ತಿಲ್ಲ. ತಾಲೂಕು ಆಡಳಿತ ಪೂರೈಸುವ ನೀರು, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಎರಡು ದಿನಗಳಿಗೊಮ್ಮೆ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಅರೆಂದೂರು ಹೊಳೆಗೆ ಮೂರು ಚೆಕ್ ಡ್ಯಾಮ್ಗಳನ್ನು ನಿರ್ಮಿಸಲಾಗಿದ್ದು, ಇವುಗಳಲ್ಲಿ ನೀರಿಲ್ಲದೆ ಪಟ್ಟಣದ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿನ ಬಾವಿಗಳಲ್ಲಿ ಕೂಡ ನೀರು ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ಹಾಹಾಕಾರವಿದೆ. 6 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದ್ದು, ಅದಕ್ಕೂ ಹತ್ತಾರು ನಿರ್ಬಂಧಗಳನ್ನು ಹಾಕಲಾಗುತ್ತಿದೆ. 2 ಕಿ.ಮೀ. ದೂರದ ಪುಟ್ಟಪ್ಪನ ಕೆರೆಯಿಂದ ನೀರು ತರುವ ಪರಿಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿ.