ಕಾರವಾರ: ಯಾರೋ ಅಪಹರಣ ಮಾಡಿ ಕಾಡಿನಲ್ಲಿ ಬಿಟ್ಟು ಹೋಗಿದ್ದರು ಎಂದು ನಂಬಿಸಿ ಗೊಂದಲ ಸೃಷ್ಟಿಸಿದ್ದ ವಿದ್ಯಾರ್ಥಿನಿ ವಿಚಾರಣೆ ನಡೆಸಿದ ಪೊಲೀಸರು ಅಸಲಿ ಸತ್ಯ ಬಾಯ್ಬಿಡಿಸಿದ್ದಾರೆ. ಹೋಮ್ವರ್ಕ್ನಿಂದ ಹಾಗೂ ತಾಯಿಯ ಬೈಗುಳದಿಂದ ತಪ್ಪಿಸಿಕೊಳ್ಳಲು ನಾಟಕವಾಡಿರುವುದಾಗಿ ವಿದ್ಯಾರ್ಥಿನಿ ತಪ್ಪೊಪ್ಪಿಕೊಂಡಿದ್ದಾಳೆ.
ಯಲ್ಲಾಪುರ ತಾಲೂಕಿನ ನಂದೊಳ್ಳಿಯ ವಿದ್ಯಾರ್ಥಿನಿಯೊಬ್ಬಳು ಬುಧವಾರ ಸಂಜೆ ನಾಪತ್ತೆಯಾಗಿ ರಾತ್ರಿ ಮನೆ ಸಮೀಪದ ಅರಣ್ಯದಲ್ಲಿ ಪತ್ತೆಯಾಗಿದ್ದಳು. ಯಲ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ಇವಳು, ಬುಧವಾರ ಸಂಜೆ ಶಾಲೆಯಿಂದ ಮಾಗೋಡ ಬಸ್‌ನಲ್ಲಿ ಮನೆಗೆ ಹೊರಟಿದ್ದು, ನಂದೊಳ್ಳಿಯಲ್ಲಿ ಇಳಿದಿದ್ದಳು. ಆದರೆ, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಅಪಹರಣವಾಗಿರಬಹುದೆಂದು ಯಲ್ಲಾಪುರ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದರು.
ಬೈಗುಳದಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕ:
ಸಂಜೆಯಿಂದ ರಾತ್ರಿಯವರೆಗೆ ಗ್ರಾಮಸ್ಥರೆಲ್ಲ ಸೇರಿ ಹುಡುಕಿದರೂ ವಿದ್ಯಾರ್ಥಿನಿ ಪತ್ತೆಯಾಗಿರಲಿಲ್ಲ. ಮಧ್ಯರಾತ್ರಿ ಮನೆಯ ಸಮೀಪದ ಕಾಡಿನಲ್ಲಿ ಪತ್ತೆಯಾಗಿದ್ದಾಳೆ. ಆದರೆ ಯಾವುದೇ ಸಮಸ್ಯೆಗಳಿಲ್ಲದೆ ಸುರಕ್ಷಿತವಾಗಿದ್ದಳು. ಈ ವೇಳೆ ಬಾಲಕಿ, ಬೈಕ್ ಮೇಲೆ ಬಂದ ಮೂವರು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಅಪಹರಿಸಿದ್ದರು. ರಾತ್ರಿ ವೇಳೆ ಕೈಕಾಲು ಕಟ್ಟಿ ಮನೆಯ ಬಳಿಯ ಕಾಡಿನಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿದ್ದಳು. ಅದರಂತೆ ಡಿವೈಎಸ್‌ಪಿ ರವಿ ನಾಯ್ಕ, ಪಿಐ ಸುರೇಶ ಯಳ್ಳೂರ ಹಾಗೂ ಪಿಎಸ್‌ಐ ಮಂಜುನಾಥ ಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ತನಿಖೆ ವೇಳೆ ಸತ್ಯಾಂಶ ಬಯಲು..!
ವಿದ್ಯಾರ್ಥಿನಿ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಶಾಲಾ ಚಟುವಟಿಕೆಗಳನ್ನು ಸರಿಯಾಗಿ ಮಾಡದ ಕಾರಣ ತಾಯಿಯು ಶಾಲಾ ಶಿಕ್ಷಕರಲ್ಲಿ ವಿಚಾರಿಸಿದ್ದರು. ಈ ವೇಳೆ ಶಾಲಾ ಚಟುವಟಿಕೆಗಳನ್ನು ಸಮರ್ಪಕವಾಗಿ ಮಾಡಿಲ್ಲವೆಂದು ಶಿಕ್ಷಕರು ತಾಯಿಗೆ ತಿಳಿಸಿದ್ದರು. ಹೀಗಾಗಿ ಮನೆಗೆ ಹೋದಮೇಲೆ ತಾಯಿ ಬೈಯ್ಯಬಹುದು ಅಥವಾ ಹೊಡೆಯಬಹುದೆಂದು ಊಹಿಸಿಕೊಂಡು ಶಾಲೆಯಿಂದ ವಾಪಸ್ಸಾಗಿ ಮನೆಗೆ ತೆರಳದೆ ಹತ್ತಿರದ ಕಾಡು ಪ್ರದೇಶದಲ್ಲಿ ಕುಳಿತಿದ್ದೆ. ರಾತ್ರಿ ಮನೆಯ ನೆನಪಾಗಿ ಅಪಹರಣಗೊಂಡ ರೀತಿಯಲ್ಲಿ ಸನ್ನಿವೇಶ ಸೃಷ್ಟಿಸಿ ನನ್ನಷ್ಟಕ್ಕೆ ನಾನೇ ಧರಿಸಿದ್ದ ಲೆಗ್ಗಿನ್ ಪ್ಯಾಂಟ್ ತುದಿಗಳನ್ನು ಒಂದಕ್ಕೊಂದು ಸೇರಿಸಿಕೊಂಡು ಕಾಲು ಕಟ್ಟಿಕೊಂಡಿದ್ದೆ. ನಂತರ ಬಾಯಿಗೆ ಮತ್ತು ಕೈ ಕಟ್ಟಿಕೊಂಡಿದ್ದೆ. ನಾನು ಮನೆಗೆ ಹೊರಡುವ ಸಮಯದಲ್ಲಿ ಯಾವುದೋ ಬೈಕ್ ನನ್ನ ಮನೆಗೆ ತೆರಳುವ ಸಪ್ಪಳ ಕೇಳಿ 'ಮಮ್ಮಿ ಮಮ್ಮಿ' ಎಂದು ಕಿರುಚಿದೆ. ನಾ ಕೂಗಿದ ಶಬ್ದ ಕೇಳಿ ಮನೆಯಿಂದ ಅಜ್ಜಿ ಹಾಗೂ ಸಂಬಂಧಿಕರು ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾಳೆ.
ಈ ವೇಳೆ ಪೊಲೀಸರು ತಪ್ಪು ಮಾಡಿದ ವಿದ್ಯಾರ್ಥಿನಿಗೆ ಎಚ್ಚರಿಕೆ ನೀಡಿದ್ದು, ಮತ್ತೆ ಇಂತಹ ತಪ್ಪು ಮಾಡದಂತೆ ಬುದ್ದಿವಾದ ಹೇಳಿದ್ದಾರೆ ಎನ್ನಲಾಗಿದೆ.