ಕಾರವಾರ: ಸರ್ಕಾರ ಕೊರೊನಾ ನಿಯಂತ್ರಣ ಸಂಬಂಧ 14 ದಿನಗಳ ಕಾಲ ವಿಧಿಸಿರುವ ಕೊರೊನಾ ಕರ್ಫ್ಯೂ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅನಗತ್ಯವಾಗಿ ಓಡಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಎಚ್ಚರಿಸಿದ್ದಾರೆ.
ನಗರ ಪ್ರವೇಶಿಸುವ ಪ್ರದೇಶಗಳಲ್ಲಿ ಚೆಕ್ಪೋಸ್ಟ್ ಹಾಕಿ ಪ್ಯಾಟ್ರೋಲಿಂಗ್ ಮಾಡಲಾಗುತ್ತದೆ. ಮೆಡಿಕಲ್ ಸಿಬ್ಬಂದಿ, ಗುರುತಿಸಿದ ಸರ್ಕಾರಿ ಸಿಬ್ಬಂದಿ, ಅನಾರೋಗ್ಯ ಸಂಬಂಧ ಆಸ್ಪತ್ರೆಗೆ ತೆರಳುವವರು ಸೇರಿದಂತೆ ಅಗತ್ಯ ಇದ್ದವರು ಮಾತ್ರ ಸೂಕ್ತ ಕಾರಣ ಇಲ್ಲವೇ ಪಾಸ್, ಗುರುತಿನ ಚೀಟಿಯನ್ನು ಪೊಲೀಸರಿಗೆ ತೋರಿಸಬೇಕು. ಜನರು ಕಷ್ಟ ಆದರೂ ಕೂಡ ಸಹಕಾರ ನೀಡಬೇಕು. ಒಂದೊಮ್ಮೆ ಯಾರೇ ಅನಾವಶ್ಯಕವಾಗಿ ಓಡಾಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮಾರುಕಟ್ಟೆಗಳಲ್ಲಿ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಜನಸಂದಣಿ ನಿರ್ಮಾಣವಾಗುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ವ್ಯಾಪಾರಸ್ಥರಿಗೆ ದೂರ ಕುಳಿತು ವ್ಯಾಪಾರ ಮಾಡುವಂತೆ ಸೂಚಿಸಲಾಗಿದೆ. ಆದಾಗ್ಯೂ ಮುಂದುವರಿದಲ್ಲಿ ಮಾರುಕಟ್ಟೆಗಳನ್ನು ಮೈದಾನಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಸೇರಿದಂತೆ ಇತರೆ ಭಾಗಗಳಿಂದ ಬಂದವರ ಮೇಲೆ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ನಿಗಾ ಇಡಲು ಈಗಾಗಲೇ ಸೂಚಿಸಲಾಗಿದೆ. ಹೊರಗಡೆಯಿಂದ ಬಂದವರು ಸ್ವಯಂಪ್ರೇರಿತರಾಗಿ ಕ್ವಾರಂಟೈನ್ ಆಗಬೇಕು. ಆ ಮೂಲಕ ಕೊರೊನಾ ತಡೆಗಟ್ಟಲು ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.