ಕಾರವಾರ : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಎಲ್ಲೆ ಮೀರಿದೆ. ಉದ್ಯೋಗ ನಿಮಿತ್ತ ದೇಶ ತೊರೆದು ಅಫ್ಘಾನ್ ಸೇರಿದ್ದ ಅದೆಷ್ಟೋ ಮಂದಿ ತಾಲಿಬಾನಿಗಳ ಕ್ರೌರ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗೆ ಕಳೆದ ಎರಡು ವಾರಗಳಿಂದ ತಾಲಿಬಾನಿಗಳ ಗುಂಡಿನ ಮೊರೆತ ಕೇಳಿ ಭಯದಲ್ಲಿ ಕಾಲ ಕಳೆಯುತ್ತಿದ್ದ ಕಾರವಾರ ಮೂಲದ ವ್ಯಕ್ತಿಯೋರ್ವ ಕೊನೆಗೂ ತವರು ಸೇರಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಫ್ಘಾನಿಸ್ತಾನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು, ರಾಜಧಾನಿ ಕಾಬೂಲನ್ನಲ್ಲಿ ಕಳೆದ ಕೆಲ ದಿನಗಳಿಂದ ರಣಕೇಕೆ ಹಾಕಿ ಸಿಕ್ಕ ಸಿಕ್ಕವರ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾರೆ. ಆದರೆ, ಇದೇ ಕಾಬೂಲನ್ ನಲ್ಲಿ ಸಿಲುಕಿದ್ದ ಕಾರವಾರ ತಾಲೂಕಿನ ಸದಾಶಿವಗಡದ ರಾಜೇಶ್ ಪಡುವಳಕರ್ ಅಮೆರಿಕಾ ಸೇನೆ ಹಾಗೂ ಭಾರತದ ಸೇನೆಯ ಸಹಕಾರದಲ್ಲಿ ವಿಮಾನದ ಮೂಲಕ ಕೊನೆಗೂ ತವರಿಗೆ ಮರಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡಿಕೊಂಡಿದ್ದ ರಾಜೇಶ್ ಮನೆಗೆ ಮರಳಿ ಮತ್ತೆ ಕಳೆದ ಆರು ತಿಂಗಳ ಹಿಂದೆ ಕಾಬೂಲ್ಗೆ ತೆರಳಿದ್ದ. ಅಮೆರಿಕಾ ಸೇನೆಗಳಿಗೆ ಆಹಾರ ಒದಗಿಸುತ್ತಿದ್ದ ಕಂಪನಿಯಲ್ಲಿ ವಾಹನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಆದರೆ, ತಾಲಿಬಾನಿಗಳು ಒಂದೊಂದೇ ನಗರಗಳನ್ನು ಆಕ್ರಮಣ ಮಾಡುತ್ತಿದ್ದರಿಂದ ಇಷ್ಟು ಬೇಗ ಈ ಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ.
14ರಂದೇ ಮಾಹಿತಿ ನೀಡಿತ್ತಂತೆ ಅಮೆರಿಕಾ ಸೇನೆ
ಆದರೆ, ಯಾವಾಗ ತಾಲಿಬಾನಿಗಳು ಕಾಬೂಲ್ ಆಕ್ರಮಿಸಿಕೊಂಡಿದ್ದರೋ ಆಗ ರಾಜೇಶ್ ಸೇರಿ ಕಂಪನಿಯಲ್ಲಿದ್ದ ಸುಮಾರು 700 ಮಂದಿಗೆ, ಆಗಸ್ಟ್ 14ರಂದೇ ಅಮೆರಿಕಾ ಸೇನೆ ಕಾಬೂಲ್ ತೊರೆಯಬೇಕಾದ ಸ್ಥಿತಿ ಬಗ್ಗೆ ಮಾಹಿತಿ ನೀಡಿತ್ತಂತೆ. ಆದರೆ, ತಾಲಿಬಾನಿಗಳು ಕಾಬೂಲ್ ಸಂಪೂರ್ಣ ವಶಪಡಿಸಿಕೊಂಡ ಬಳಿಕ ಕಂಪನಿ ಬಂದ್ ಆಗಿತ್ತು.
ಹಾಗಾಗಿ, ಆಗಸ್ಟ್ 17ರವರೆಗೂ ಕಾಬೂಲ್ ನಲ್ಲಿಯೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಅಮೆರಿಕಾ ಸೇನೆ ಭದ್ರತೆ ಒದಗಿಸಿದ ಕಾರಣ ಯಾವುದೇ ಸಮಸ್ಯೆ ಆಗಿರಲಿಲ್ಲ. ಕೊನೆಗೆ ಸೇನೆಯೇ ಕಾಬೂಲ್‌ನಿಂದ ಕತಾರ್‌ಗೆ ಕರೆದೊಯ್ದು ಸುರಕ್ಷತೆ ನೀಡಿತ್ತು ಎಂದು ರಾಜೇಶ್ ಮಾಹಿತಿ ನೀಡಿದ್ದಾರೆ.
ಕಂಡ ಕಂಡ ವಿಮಾನದ ಕಡೆ ಓಡುತ್ತಿದ್ದ ಅಫ್ಘನ್ನರು
ಕಾಬೂಲ್ ನಲ್ಲಿ ಹೊರಗೆ ಹೋಗಲು ಅವಕಾಶ ಇಲ್ಲದ ಕಾರಣ ಅಲ್ಲಿನ ಸ್ಥಿತಿ ನೋಡಿಲ್ಲ. ಆದರೆ, ಎಲ್ಲ ಸಮಯದಲ್ಲಿಯೂ ಗುಂಡಿನ ಸದ್ದು ಕೇಳುತ್ತಿತ್ತು. ಇನ್ನು, ಕಾಬೂಲ್ ನಿಂದ ಕತಾರ್ ಗೆ ಬರಲು ಅಮೆರಿಕಾ ಸೇನೆ ಸಹಾಕರ ನೀಡಿತು. ವಿಮಾನ ನಿಲ್ದಾಣಗಳಲ್ಲಿ ಅಫ್ಘನ್ನರು ದೇಶ ತೊರೆಯಲು ಕಂಡ ಕಂಡ ವಿಮಾನದ ಕಡೆ ಓಡುತ್ತಿದ್ದರಿಂದ ನಾವು ಕೂಡ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿತ್ತು.
ಕೊನೆಗೆ ಭಾರತೀಯ ರಾಯಭಾರಿಗಳ ಸಹಕಾರದಲ್ಲಿ ವಿಮಾನ ಹತ್ತಿದ್ದೇವೆ. ಕಳೆದ ಎರಡು ವಾರದಲ್ಲಿ ಒಂದೆರಡು ದಿನ ಊಟವೂ ಇಲ್ಲದೆ ಇತ್ತ ಮನೆಯವರನ್ನು ಸಂಪರ್ಕಿಸಲು ಇಂಟರ್ನೆಟ್ ವ್ಯವಸ್ಥೆಯೂ ಇಲ್ಲದೆ ಸಮಸ್ಯೆ ಅನುಭವಿದುವಂತಾಗಿತ್ತು. ಆದರೆ, ಇದೀಗ ಸುರಕ್ಷಿತವಾಗಿ ಮನೆ ಸೇರಿದ್ದೇವೆ.
ತಾಲಿಬಾನಿಗಳ ಕ್ರೌರ್ಯ ಕಂಡ ಕುಟುಂಬಸ್ಥರಿಗೆ ಆತಂಕ
ರಾಜೇಶ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಕುಟುಂಬ ಕೆಲ ವೇಳೆ ಸಂಪರ್ಕ ಸಾಧ್ಯವಾಗದೇ ಇದ್ದಾಗ ಆತಂಕವಾಗುತಿತ್ತು. ಅದು ಅಲ್ಲದೆ ಟಿವಿಗಳಲ್ಲಿ ತಾಲಿಬಾನಿಗಳ ಕ್ರೌರ್ಯ ಕಂಡು ಎಲ್ಲಿ ಏನಾಗುವುದು ಎಂಬ ಆತಂಕ ಇತ್ತು.
ಆದರೆ, ವಿಮಾನ ಮೂಲಕ ದೆಹಲಿ ತಲುಪಿರುವ ಬಗ್ಗೆ ವಿಷಯ ತಿಳಿಸಿದಾಗ ಖುಷಿಯಾಗಿತ್ತು. ಇದೀಗ ಮನೆಗೆ ಬಂದು ತಲುಪಿದ್ದು ಮನೆಯವರೆಲ್ಲರೂ ಖುಷಿಯಾಗಿದ್ದೇವೆ ಅಂತಾರೆ ರಾಜೇಶ್ ಸಹೋದರ. ಉದ್ಯೋಗ ನಿಮಿತ್ತ ದೇಶ ತೊರೆದು ತಾಲಿಬಾನಿಗಳ ಕ್ರೌರ್ಯದ ಆತಂಕದಲ್ಲಿ ರಾಜೇಶ್ ಕೊನೆಗೂ ಯಾವುದೇ ಸಮಸ್ಯೆ ಇಲ್ಲದೆ ತವರು ಸೇರಿದ್ದಾರೆ.