ಕಾರವಾರ(ಉತ್ತರಕನ್ನಡ):ಕಾರವಾರದಲ್ಲಿ ಕಳೆದ ಮೂರು ತಿಂಗಳಿಂದ ಬಂದ್ ಮಾಡಲಾಗಿರುವ ಸುರಂಗ ಮಾರ್ಗವನ್ನು ತೆರವುಗೊಳಿಸಬೇಕೆಂದು ಹೋರಾಟ ತೀವ್ರಗೊಂಡಿದೆ. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ನೂರಾರು ಜನರು ಸುರಿಯುವ ಮಳೆಯನ್ನು ಲೆಕ್ಕಿಸದೇ ಇಂದು (ಸುರಂಗಮಾರ್ಗ) ಟನಲ್ ಎದುರು ಇಂದು ಪ್ರತಿಭಟನೆ ನಡೆಸಿದರು.
ಹೌದು.. ರಾಷ್ಟ್ರೀಯ ಹೆದ್ದಾರಿ 66ರ ನಗರದ ಆರಂಭದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಟನಲ್ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ವಾರದ ಹಿಂದೆ ಕರೆ ನೀಡಿದ್ದರು. ಅದರಂತೆ ಇಂದು ಸಾರ್ವಜನಿಕರ ಜೊತೆಗೂಡಿ ಟನಲ್ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಬಲವಂತವಾಗಿ ಬ್ಯಾರಿಕೆಡ್ ತೆರವುಗೊಳಿಸಲು ಪ್ರತಿಭಟನಾಕಾರರು ಮುನ್ನುಗ್ಗಿದ್ದರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಕೊನೆಗೆ ಪೊಲೀಸರು ಪ್ರತಿಭಟನಾಕಾರರನ್ನು ಎಳೆದೊಯ್ದು ಪೊಲೀಸ್ ವಾಹನದಲ್ಲಿ ಬಂಧಿಸಿದ್ದರು.
ಬಳಿಕ ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಶಂಕರ್ ಮಾತನಾಡಿ, ಜಿಲ್ಲಾಡಳಿತದಿಂದ ಈ ಸಂಬಂಧ ಸಭೆ ಕರೆಯಲಾಗಿದೆ. ಸಭೆಯಲ್ಲಿ ತೀರ್ಮಾನದ ಬಳಿಕ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆ. ಈಗ ಈ ರೀತಿ ಪ್ರತಿಭಟನೆ ಮಾಡಿದಲ್ಲಿ ಎಲ್ಲರನ್ನೂ ಬಂಧನ ಮಾಡುವುದಾಗಿ ಎಚ್ಚರಿಸಿದರು.
ಕೊನೆಗೆ ಪ್ರತಿಭಟನಾಕಾರರು ಸಭೆ ಮುಕ್ತಾಯದವರೆಗೆ ಟನಲ್ ಎದುರು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಬಳಿಕ ಪೊಲೀಸರು ಅವಕಾಶ ಕಲ್ಪಿಸಿದರು. ಜನರು ಸುರಿವ ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ, ವರ್ಷದ ಹಿಂದೆ ಸ್ಥಳೀಯ ಶಾಸಕರೇ ನಿಂತು ಉದ್ಘಾಟನೆ ಮಾಡಿದ ಟನಲ್ ಅನ್ನು ಇದೀಗ ಬಂದ್ ಮಾಡಿ ಇಡಲಾಗಿದೆ. ಜಿಲ್ಲಾಡಳಿತ ಯಾರದ್ದೋ ಒತ್ತಡಕ್ಕೆ ಇದೀಗ ಸಾರ್ವಜನಿಕರಿಗೆ ಈ ರೀತಿ ಟನಲ್ ಬಂದ್ ಮಾಡಿ ಇಟ್ಟಿರುವುದು ತಪ್ಪು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರನ್ನು ಜನ ಸಾರ್ವಜನಿಕರ ಕೆಲಸ ಮಾಡಲು ಆರಿಸಿ ಕಳುಹಿಸಿದ್ದಾರೆ. ಆದರೆ, ಇಬ್ಬರು ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಸುರಂಗಮಾರ್ಗ ಬಂದ್ ಮಾಡಿಸಿದ್ದಾರೆ. ತಾಕತ್ತು ಇದ್ದರೇ ಟೋಲ್ ಸಂಗ್ರಹ ಬಂದ್ ಮಾಡಿಸಲಿ ಎಂದು ಸವಾಲು ಹಾಕಿದರು.
ಅಲ್ಲದೇ ಸುರಂಗ ಮಾರ್ಗದ ಸಂಚಾರಕ್ಕೆ ಅನುವು ಮಾಡುವವರೆಗೂ ಹೋರಾಟ ಮುಂದುವರಿಸುತ್ತೇವೆ. ನನ್ನ ಪ್ರಾಣ ಹೋದರು ಹೋರಾಟ ನಿಲ್ಲಿಸುವುದಿಲ್ಲ. ಪೊಲೀಸರು ಸುಮ್ಮನೆ ಬಂಧಿಸಿದ್ದಲ್ಲಿ ನಾಳೆ ಕಾರವಾರ - ಅಂಕೋಲಾ ಬಂದ್ ಮಾಡಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಇನ್ನು ಮಾಜಿ ನಗರಸಭೆ ನಿತಿನ್ ಪಿಕಳೆ ಮಾತನಾಡಿ, ಸುರಿಯುವ ಮಳೆ ಲೆಕ್ಕಿಸದೇ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಟನಲ್ನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಅಲ್ಲಿವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದರು.