ಕಾರವಾರ: ಉತ್ತರ ಕನ್ನಡದ ಮೊದಲ ಹಂತದ ಚುನಾವಣೆ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತ ಮತದಾನದೊಂದಿಗೆ ಮುಕ್ತಾಯವಾಗಿದೆ.
ಜಿಲ್ಲೆಯ ಕರಾವಳಿಯ 5 ತಾಲೂಕುಗಳ 101 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,264 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 3,735 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ. ಕರಾವಳಿಯ ಐದು ತಾಲುಕುಗಳಲ್ಲಿಯೂ ಬಹುತೇಕ ಶಾಂತಿಯುತ ಮತದಾನವಾಗಿದೆ. ಕುಮಟಾ ತಾಲೂಕಿನ ದೇವಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಗಿರಿ ಹಾಗೂ ಮಠ ವಾರ್ಡ್ನ ಮತದಾರರ ವಾರ್ಡ್ ಬದಲಾದ ಕಾರಣ ಕೆಲ ಕಾಲ ಗೊಂದಲ ಸೃಷ್ಟಿಯಾಗಿ ಮತದಾನಕ್ಕೆ ಅಡ್ಡಿಯಾಗುವಂತಾಗಿತ್ತು. ಹಿಂದೆ ಮತವಿದ್ದ ತಮ್ಮ ವಾರ್ಡ್ ಹೊರತುಪಡಿಸಿ ಕಡೇ ಕೋಡಿ ವಾರ್ಡಿಗೆ ಸೇರಿಸಲಾಗಿದೆ ಎಂದು ಅಭ್ಯರ್ಥಿಗಳು ಹಾಗೂ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಕಾರವಾರದ ಚಿತ್ತಾಕುಲ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಇಂಕ್ ಬಾಟಲ್ ತೆರೆಯಲು ಸಾಧ್ಯವಾಗದ ಕಾರಣ ಸುಮಾರು 15 ನಿಮಿಷ ತಡವಾಗಿ ಮತದಾನ ಮಾಡುವಂತಾಗಿತ್ತು. ಇದಲ್ಲದೇ ತಾಲೂಕಿನ ಅಸ್ನೋಟಿ ಗ್ರಾಮ ಪಂಚಾಯತ್‌ನ ಬೂತ್ ಸಂಖ್ಯೆ 19 ರಲ್ಲಿ ಕೆಲವರು ಮತದಾರರ ಪಟ್ಟಿಯ ಸಂಖ್ಯೆಯನ್ನು ನೀಡುವ ಚೀಟಿಯ ಮೇಲೆ ಅಭ್ಯರ್ಥಿಗಳ ಚಿಹ್ನೆಯನ್ನು ಮುದ್ರಿಸಿದ್ದು ಅದರ ಮೇಲೆ ಮತದಾರರ ಸಂಖ್ಯೆಯನ್ನ ಬರೆದು ಕೊಟ್ಟಿರುವುದಕ್ಕೆ ಅಭ್ಯರ್ಥಿಯಾದ ಅರು ಸಾಳುಂಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೂಡಲೇ ನಿರ್ಲಕ್ಷ್ಯ ತಾಳಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಮರು ಮತದಾನ ನಡೆಸಬೇಕು. ಇಲ್ಲವಾದಲ್ಲಿ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೀನುಗಾರಿಕೆಗೆ ತೆರಳಿದ್ದ ಪಾತಿ ದೋಣಿ ಮುಳುಗಡೆ: ಕರಾವಳಿ ಕಾವಲು ಪಡೆಯಿಂದ ರಕ್ಷಣೆ
ಇನ್ನು ಶಾಸಕಿ ರೂಪಾಲಿ ನಾಯ್ಕ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮ ಪಂಚಾಯತ್‌ನ ಬೂತ್ ಸಂಖ್ಯೆ 75ರಲ್ಲಿ ತಮ್ಮ ಹಕ್ಕು ಚಲಾಯಿಸಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯಿತಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ತಳಮಟ್ಟದಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪಂಚಾಯಿತಿಗಳು ಪ್ರಮುಖ ಪಾತ್ರವಹಿಸುತ್ತವೆ. ಜನರು ಉತ್ತಮ ಅಭ್ಯರ್ಥಿಗಳನ್ನ ನೋಡಿ ಆಯ್ಕೆ ಮಾಡಬೇಕು. ಪಂಚಾಯಿತಿ ಅಭಿವೃದ್ಧಿಯಾದಲ್ಲಿ ದೇಶ ಅಭಿವೃದ್ಧಿಯಾಗಲಿದೆ. ಯಾರೇ ಗೆದ್ದರೂ ಗ್ರಾಮದ ಅಭಿವೃದ್ಧಿಯೇ ಗುರಿಯಾಗಬೇಕು ಎಂದು ಹೇಳಿದ್ದಾರೆ.
ಒಟ್ಟಾರೆ ಜಿಲ್ಲಾದ್ಯಂತ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಸದ್ಯ ಮತದಾರನ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.30 ರಂದು ಮತದಾರರು ಬರೆದ ಭವಿಷ್ಯ ಗೊತ್ತಾಗಲಿದೆ.