ಕಾರವಾರ: ಕಾರವಾರ ನಗರದ ವಾಣಿಜ್ಯ ಬಂದರನ್ನು ಸರ್ವಖುತು ಬಂದರು ಎಂದೇ ಕರೆಯಲಾಗುತ್ತದೆ. ವರ್ಷದ ಎಲ್ಲ ಅವಧಿಯಲ್ಲೂ ಬಂದರಿಗೆ ಹಡಗುಗಳು ಬಂದು ಹೋಗಲು ಯಾವುದೇ ಅಡೆತಡೆ ಬರದ ಬಂದರು ಕಾರವಾರ ವಾಣಿಜ್ಯ ಬಂದರು. ಈ ವರ್ಷ ಬಂದರು ವ್ಯವಹಾರ ಲಾಭದಾಯಕದತ್ತ ಸಾಗಿದ್ದು, ಸುಮಾರು 21 ಕೋಟಿಗೂ ಅಧಿಕ ಹಣ ಗಳಿಕೆ ಮಾಡುವ ಮೂಲಕ ಬಂದರು ವ್ಯವಹಾರ ನಷ್ಟದಿಂದ ಲಾಭದತ್ತ ಸಾಗುವಂತಾಗಿದೆ.
ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಾಣಿಜ್ಯ ಬಂದರು ಸದ್ಯ ಲಾಭದತ್ತ ಸಾಗುವ ಮೂಲಕ ಗಮನ ಸೆಳೆದಿದೆ. ಕೋವಿಡ್ ನಂತರ ಬಂದರಿಗೆ ಹಡಗುಗಳು ಬರುವ ಸಂಖ್ಯೆ ಕಡಿಮೆಯಾಗಿ ವ್ಯವಹಾರದಲ್ಲಿ ಕುಂಠಿತವಾಗಿತ್ತು. ಮಾರ್ಚ್ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದ್ದು, ಪ್ರತಿ ಆರ್ಥಿಕ ವರ್ಷ ಕೊನೆಯ ಅವಧಿಯಲ್ಲಿ ಬಂದರು ಇಲಾಖೆ ವರ್ಷದಲ್ಲಿ ಬಂದರಿನಲ್ಲಿ ನಡೆದ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ಬಾರಿ ಇಲಾಖೆ ತನ್ನ ವರದಿ ಬಿಡುಗಡೆ ಮಾಡಿದ್ದು ಕಳೆದ ವರ್ಷಕ್ಕಿಂತ ಬಹುತೇಕ ಎಲ್ಲ ವ್ಯವಹಾರದಲ್ಲಿ ಹೆಚ್ಚಿಗೆ ಆಗಿರುವುದಾಗಿ ತಿಳಿಸಿದೆ.
ವಾಣಿಜ್ಯ ಬಂದರಿಗೆ 2021-22 ನೇ ಸಾಲಿನಲ್ಲಿ ಸುಮಾರು 120 ಹಡಗುಗಳು ಆಗಮಿಸಿದ್ದವು. ಈ ವೇಳೆ, ಸುಮಾರು 3,74,028 ಮೆಟ್ರಿಕ್ ಟನ್ ಆಮದನ್ನು ಬಂದರಿನಲ್ಲಿ ಹಡಗಿನಿಂದ ಮಾಡಿಕೊಂಡಿದ್ದು, 3,57,379 ಮೆಟ್ರಿಕ್ ಟನ್ ರಫ್ತು ಮಾಡಲಾಗಿತ್ತು. 2022-23ನೇ ಸಾಲಿನಲ್ಲಿ 148 ಹಡಗುಗಳು ಆಗಮಿಸಿದೆ. ಇನ್ನು 4,47,026 ಮೆಟ್ರಿಕ್ ಟನ್ ಆಮದು ಮಾಡಿಕೊಂಡಿದ್ದು, 4,66,293 ರಫ್ತು ವ್ಯವಹಾರ ಬಂದರಿನಲ್ಲಿ ನಡೆದಿದೆ. ಬಂದರಿಗೆ ಹಡಗುಗಳ ಬರುವಿಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ 23.3 ರಷ್ಟು ಹೆಚ್ಚಳ ಕಂಡಿದ್ದರೆ, ಆಮದಿನಲ್ಲಿ ಶೇಕಡಾ 19.5 ರಫ್ತಿನಲ್ಲಿ ಶೇಕಡಾ 24.87 ರಷ್ಟು ಹೆಚ್ಚಳವಾಗಿದೆ. ಇನ್ನು 2021-22ನೇ ಸಾಲಿನಲ್ಲಿ ಬಂದರು ವ್ಯವಹಾರದಿಂದ ಸುಮಾರು 16,96,41.974 ಕೋಟಿ ಹಣವನ್ನು ಇಲಾಖೆ ಗಳಿಕೆ ಮಾಡಿತ್ತು. 2022-23ನೇ ಸಾಲಿನಲ್ಲಿ 21,00,86,590 ಕೋಟಿ ಗಳಿಕೆ ಮಾಡಿದ್ದು, ಶೇಕಡಾ 24 ರಷ್ಟು ಗಳಿಕೆ ಪ್ರಮಾಣ ಹೆಚ್ಚಾಗಿದೆ.
ಇನ್ನು ಕೇವಲ ಬಂದರು ಇಲಾಖೆಗೆ ಮಾತ್ರವಲ್ಲದೇ ಬಂದರಿನಲ್ಲಿ ನಡೆದ ವ್ಯವಹಾರದಿಂದ ಕಸ್ಟಮ್ ಇಲಾಖೆಗೆ 2021-22ನೇ ಸಾಲಿನಲ್ಲಿ 179.33 ಕೋಟಿ ಆದಾಯವಾಗಿತ್ತು. ಈ ಬಾರಿ ಸುಮಾರು 300 ಕೋಟಿಗೂ ಅಧಿಕ ಆದಾಯವನ್ನು ಕಸ್ಟಮ್ ಇಲಾಖೆ ಗಳಿಸಿದೆ. ಇದಲ್ಲದೇ ಕೇಂದ್ರ ಅಬಕಾರಿ ಸುಂಕ ಇಲಾಖೆಗೆ, ಕಳೆದ ವರ್ಷ 2.98 ಕೋಟಿ ಹಣ ಗಳಿಕೆಯಾಗಿದ್ದರೆ, ಈ ಬಾರಿ 3.60 ಕೋಟಿ ಹಣ ಗಳಿಕೆಯಾಗುವ ಮೂಲಕ ಶೇಕಡಾ 21 ರಷ್ಟು ಹೆಚ್ಚಳವಾಗಿದೆ. ಕಾರವಾರದ ಬಂದರು ಲಾಭದತ್ತ ಸಾಗುತ್ತಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಬಂದರಿನಲ್ಲಿ ಇನ್ನಷ್ಟು ಅಭಿವೃದ್ಧಿ ಚಟುವಟಿಕೆ ಮಾಡಿದರೆ, ಇನ್ನೂ ಹೆಚ್ಚಿನ ಲಾಭ ಗಳಿಸಲಿದೆ. ಅಲ್ಲದೇ ಸ್ಥಳೀಯರಿಗೆ ಉದ್ಯೋಗವಕಾಶ ಸಿಗುವ ನಿಟ್ಟಿನಲ್ಲಿಯೂ ಬಂದರು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸದ್ಯ ಬಂದರಿನಲ್ಲಿ ಹೂಳನ್ನು ತೆಗೆಸಿ, ಇನ್ನಷ್ಟು ಅಭಿವದ್ಧಿ ಮಾಡುವ ಮೂಲಕ ಈ ವರ್ಷ ಹೆಚ್ಚಿನ ಹಡಗುಗಳು ಕಾರವಾರಕ್ಕೆ ಬರುವಂತೆ ಮಾಡಲು ಇಲಾಖೆ ಮುಂದಾಗಿದೆ. ಒಟ್ಟಿನಲ್ಲಿ ಹಿನ್ನಡೆಯಲ್ಲಿದ್ದ ಕಾರವಾರ ಬಂದರು ಮತ್ತೆ ಲಾಭದತ್ತ ಸಾಗಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಈ ಮೂಲಕ ಹೆಚ್ಚು ಹೆಚ್ಚು ವ್ಯವಹಾರಗಳು ನಡೆದು ಸ್ಥಳೀಯರಿಗೆ ಉದ್ಯೋಗ ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಿಗಲಿ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಇದನ್ನೂ ಓದಿ: ದಶಕಗಳ ಸಮಸ್ಯೆಗೆ ಪರಿಹಾರ: ಬೈತಖೋಲ ಬಂದರು ಹೂಳೆತ್ತುವ ಕಾಮಗಾರಿಗೆ ಚಾಲನೆ