ಕಾರವಾರ: ಸೂಕ್ತ ರಸ್ತೆಯಿಲ್ಲದ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯೋರ್ವಳನ್ನು ಜೋಲಿಯ ಮೂಲಕ ಹೊತ್ತು 8 ಕಿಲೋಮೀಟರ್ ದೂರದ ಆಸ್ಪತ್ರೆಗೆ ದಾಖಲಿಸಿದ ಕರುಣಾಜನಕ ಘಟನೆ ಕಾರವಾರ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ಕಾರವಾರ ನಗರಸಭೆ ವ್ಯಾಪ್ತಿಯ ಗುಡ್ಡೆಹಳ್ಳಿ ಎಂಬ ಗ್ರಾಮಕ್ಕೆ ಸೂಕ್ತ ರಸ್ತೆಯಿಲ್ಲ. ಗುಡ್ಡದ ತುದಿಯಲ್ಲಿರುವ ಗ್ರಾಮಕ್ಕೆ ಕಚ್ಚಾ ರಸ್ತೆ ಇದ್ದು, ಅದು ಕೂಡ ಮಳೆಗಾಲದಲ್ಲಿ ಸಂಪೂರ್ಣ ಹಾಳಾಗಿ ಓಡಾಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ.
ಓದಿ: ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎನ್ನುವುದಲ್ಲ, ಶಾಸಕರು ಹೇಳುವಂತಾಗಬೇಕು: ರಾಮದಾಸ್
ಸೋಮವಾರ ಗ್ರಾಮದ ಮಹಿಳೆಯೋರ್ವರು ಅನಾರೋಗ್ಯಕ್ಕೀಡಾಗಿದ್ದು, ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಪರಿಸ್ಥಿತಿ ಇತ್ತು. ಯಾವುದೇ ವಾಹನಗಳು ಓಡಾಡದ ಕಾರಣ ಸ್ಥಳೀಯರೇ ಸೀರೆ ಜೋಲಿಯೊಂದನ್ನು ಸಿದ್ದಪಡಿಸಿ, ಮಹಿಳೆಯನ್ನು ಕಡಿದಾದ ದಾರಿಯಲ್ಲಿ ಹೊತ್ತುಕೊಂಡು ಬಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಕೇವಲ ಹತ್ತು ನಿಮಿಷದಲ್ಲಿ ಆಸ್ಪತ್ರೆ ಸೇರಬೇಕಿದ್ದವರು ರಸ್ತೆ ಇಲ್ಲದ ಕಾರಣಕ್ಕೆ ಮೂರು ಗಂಟೆ ವಿಳಂಬವಾಗಿ ಆಸ್ಪತ್ರೆ ತಲುಪುವಂತಾಯಿತು. ಅದೃಷ್ಟವಶಾತ್ ಮಹಿಳೆಗೆ ಯಾವುದೇ ತೊಂದರೆಯಾಗಿಲ್ಲ.
ಈ ಗ್ರಾಮ ನಗರ ಪ್ರದೇಶ ವ್ಯಾಪ್ತಿಯಲ್ಲಿಯೇ ಇದ್ದರೂ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಮ್ಮ ಕುಗ್ರಾಮಕ್ಕೆ ಇನ್ನೂ ರಸ್ತೆಯಾಗಿಲ್ಲ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಹೀಗೆ ಹೊತ್ತುಕೊಂಡು ಬರಬೇಕಾದ ಸ್ಥಿತಿ ಇದ್ದು, ಕೊಂಚ ವಿಳಂಬವಾದರೂ ಪ್ರಾಣಕ್ಕೆ ಕುತ್ತು ಬರುತ್ತದೆ.
ಈ ಬಗ್ಗೆ ಪ್ರತಿ ವರ್ಷ ಈ ಬಗ್ಗೆ ನಗರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕಳೆದ ವರ್ಷ ಕಚ್ಚಾ ರಸ್ತೆಯನ್ನು ನಿರ್ಮಿಸಲಾಗಿತ್ತು ಆದರೂ, ಮಳೆಗಾಲದಲ್ಲಿ ಕೊಚ್ಚಿ ಹೋಗಿ ಮತ್ತೆ ಯಥಾಸ್ಥಿತಿ ತಲುಪಿದೆ. ರಸ್ತೆ ಸರಿಪಡಿಸಿಕೊಡುವಂತೆ ಈ ಬಾರಿಯೂ ಮನವಿ ಮಾಡಿದರೂ ಯಾರೊಬ್ಬರೂ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.