ಕಾರವಾರ: ಮೇ 29 ರಂದು ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಿದ್ದಾಪುರ ಹಾಗೂ ಹೊನ್ನಾವರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಭಟ್ಕಳ ಪುರಸಭೆಯಲ್ಲಿ ತಜೀಂ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ಕೇಕೆ ಹಾಕಿದ್ದಾರೆ.
ಬಿಜೆಪಿ ಅಲೆಗೆ ಕೊಚ್ಚಿ ಹೋದ ಕಾಂಗ್ರೆಸ್:
ಸಿದ್ದಾಪುರ ಪಟ್ಟಣ ಪಂಚಾಯಿತಿಯ 15 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ 14ರಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಕೇವಲ ಒಂದು ವಾರ್ಡ್ನಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇನ್ನು ಜೆಡಿಎಸ್ ಖಾತೆಯನ್ನು ತೆರೆಯುವಲ್ಲಿ ವಿಫಲವಾಗಿದೆ. ಕಳೆದ ಬಾರಿ 14 ವಾರ್ಡ್ಗಳ ಪೈಕಿ ಬಿಜೆಪಿ 6, ಕಾಂಗ್ರೆಸ್ 6 ಹಾಗೂ ಪಕ್ಷೇತರರು 2 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಪಡೆದುಕೊಂಡಿತ್ತು. ಆದರೆ, ಈ ಬಾರಿ ಬಿಜೆಪಿ ಅಲೆಗೆ ಕಾಂಗ್ರೆಸ್ ಕೊಚ್ಚಿ ಹೋಗಿದೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಜತೆಗೆ ಮೋದಿ ಅಲೆ ಹಾಗೂ ಬಿಜೆಪಿ ಮುಖಂಡರ ಭರ್ಜರಿ ಪ್ರಚಾರ ಕೂಡ ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೊನ್ನಾವರ ಪ.ಪಂ.ನಲ್ಲಿ ಮುಗ್ಗರಿಸಿದ ಕಾಂಗ್ರೆಸ್:
ಇನ್ನು ಕಳೆದ ಬಾರಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಹೊನ್ನಾವರ ಪಟ್ಟಣ ಪಂಚಾಯಿತಿಯನ್ನು ಈ ಬಾರಿ ಬಿಜೆಪಿ ಬಾಚಿಕೊಂಡಿದೆ. 20 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಪಡೆದು ಅಧಿಕಾರವನ್ನು ತನ್ನದಾಗಿಸಿಕೊಂಡಿದೆ. ಆದರೆ ಕಳೆದ ಬಾರಿ 9 ಸ್ಥಾನ ಪಡೆದು ಅಧಿಕಾರ ಸ್ಥಾಪಿಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ 1 ಸ್ಥಾನ ಪಡೆದು ಮುಗ್ಗರಿಸಿದೆ. ಉಳಿದಂತೆ ಜೆಡಿಎಸ್ 2 ಹಾಗೂ ಪಕ್ಷೇತರರು 5 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಭಟ್ಕಳ ಪುರಸಭೆಯಲ್ಲಿ ತಜೀಂ ಬೆಂಬಲಿತ ಅಭ್ಯರ್ಥಿಗಳ ಕಮಾಲ್:
ಭಟ್ಕಳ ಪುರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಾರುಪತ್ಯ ಮೆರೆದಿದ್ದಾರೆ. ಮುಸ್ಲಿಂ ಸಮುದಾಯದ ಪರಮೋಚ್ಚ ಸಂಸ್ಥೆ ತಜೀಂ ಬೆಂಬಲಿತ 18 ಪಕ್ಷೇತರ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಪುರಸಭೆಯ 23 ವಾರ್ಡ್ಗಳ ಪೈಕಿ 18 ವಾರ್ಡ್ಗಳು ಪಕ್ಷೇತರರ ಪಾಲಾದರೆ, 4 ಕಾಂಗ್ರೆಸ್ ಹಾಗೂ ಒಂದರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಕೂಡ ತಜೀಂ ಬೆಂಬಲಿತ 20 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಉಳಿದಂತೆ ಕಾಂಗ್ರೆಸ್ಗೆ 2, ಬಿಜೆಪಿ 1 ಸ್ಥಾನ ಲಭಿಸಿತ್ತು. ಈ ಬಾರಿ ಕಾಂಗ್ರೆಸ್ ಎರಡು ಸ್ಥಾನ ಹೆಚ್ಚಿಸಿಕೊಂಡಿದೆ. ಆದರೆ ಅತಿ ಹೆಚ್ಚು ಪಕ್ಷೇತರರು ಇರುವುದರಿಂದ ಮತ್ತೆ ತಜೀಂ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಅಧಿಕಾರ ಸ್ಥಾಪಿಸಲಿದ್ದಾರೆ.