ಕಾರವಾರ : ಜಾತ್ರೆಗಳಲ್ಲಿ ದೇವರಿಗೆ ಹರಕೆ ರೂಪದಲ್ಲಿ ಧವಸ-ಧಾನ್ಯ, ಕುರಿ-ಕೋಳಿಗಳನ್ನು ಕೊಡುವುದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ದೇವರಿಗೆ ಹರಕೆ ರೂಪದಲ್ಲಿ ಮಣ್ಣಿನ ಹಣತೆಯನ್ನು ಹಚ್ಚಿ ಮೆರವಣಿಗೆ ಮೂಲಕ ಅರ್ಪಿಸುವ ವಿಶಿಷ್ಟ ಸಂಪ್ರದಾಯವೊಂದು ಎಲ್ಲರ ಗಮನ ಸೆಳೆದಿದೆ.
ಆಷಾಢ ಮಾಸದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಕಾರವಾರ ನಗರದ ಹಬ್ಬುವಾಡ ಗುತ್ತಿಂಬೀರ ದೇವಸ್ಥಾನದಲ್ಲಿ ಪಾರಂಪರಿಕವಾಗಿ ಆಚರಿಸಿಕೊಂಡು ಬಂದ ದೇವರಿಗೆ ದೀವಜ್ (ದೀಪ) ಅರ್ಪಿಸುವ ಸಂಪ್ರದಾಯವೊಂದು ಗಮನ ಸೆಳೆದಿದೆ. 11ವರ್ಷದೊಳಗಿನ ಬಾಲಕಿಯರು ಮತ್ತು ಮದುವೆಯಾದ ಹೆಣ್ಣು ಮಕ್ಕಳು ಹರಕೆಯಾಗಿ ದೀವಜ್ ಕೊಡುವುದು ಇಲ್ಲಿನ ಸಂಪ್ರದಾಯ.
ಹರಕೆ ಹೊತ್ತ ಬಾಲಕಿಯರು ಮತ್ತು ಮಹಿಳೆಯರು ನಗರದ ಕಾಂಚಿಕಾ ಪರಮೇಶ್ವರಿ ದೇವಸ್ಥಾನದಿಂದ ಸುಮಾರು 2 ಕಿ.ಮೀ ದೂರದ ಬೆಟ್ಟದ ತುದಿಯಲ್ಲಿರುವ ಗುತ್ತಿಂಭೀರ ದೇವಸ್ಥಾನದವರೆಗೆ ಬರಿಗಾಲಲ್ಲಿ ತೆರಳಿ ಹರಕೆ ತೀರಿಸುತ್ತಾರೆ. ಈ ರೀತಿ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಇಲ್ಲನ ಭಕ್ತರ ನಂಬಿಕೆ. ಅಲ್ಲದೆ ಮಕ್ಕಳಾಗದವರು ಇಲ್ಲಿ ಹಣತೆಯ ಹರಕೆ ಸಲ್ಲಿಸಿದರೆ ಮಕ್ಕಳಾಗುತ್ತವೆಯಂತೆ.
ಗುತ್ತಿಂಬೀರ ದೇವರು ನಗರದ 18 ಗ್ರಾಮಗಳಿಗೆ ಅಗ್ರ ದೇವತೆಯಾದ ಶ್ರೀ ಮಹಾದೇವನ ಬಂಟ. ಜಾತ್ರೆಯಲ್ಲಿ ಅನಾದಿಕಾಲದಿಂದಲೂ ಹಣತೆಯನ್ನು ಹರಕೆ ರೂಪದಲ್ಲಿ ಸಲ್ಲಿಸಲಾಗುತ್ತಿದೆ. ಇಷ್ಟಾರ್ಥಗಳು ಈಡೇರಿದ ಬಳಿಕ ಜಾತ್ರೆಗೆ ಆಗಮಿಸುವ ಭಕ್ತರು ಕೂಡ ಹಣತೆಯನ್ನು ದೇವರಿಗೆ ಸಲ್ಲಿಸುತ್ತಾರೆ. ಜಾತ್ರೆಯಲ್ಲಿ ಕಳಸ, ಗುನಗಿ, ಕೋಮಾರಪಂಥ ಸೇರಿದಂತೆ ಎಲ್ಲ ಸಮುದಾಯದವರು ಭಾಗವಹಿಸುತ್ತಾರೆ. ಪ್ರತಿ ವರ್ಷವೂ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಚಂದನ ಗುನಗಾ.
ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಜಿಲ್ಲೆಯಿಂದ ಮಾತ್ರವಲ್ಲದೆ ನೆರೆಯ ಗೋವಾದಿಂದಲೂ ಜನರು ಆಗಮಿಸುತ್ತಾರೆ. ಬೆಟ್ಟದ ತಪ್ಪಲಿನಲ್ಲಿ ನೆಲೆನಿಂತಿರುವ ದೇವರ ಜಾತ್ರೆ ನೋಡುವುದಕ್ಕೂ ಅಷ್ಟೇ ಆಕರ್ಷಣೀಯವಾಗಿದೆ.