ಕಾರವಾರ: ಹೆಣ್ಣು ಸಂಸಾರದ ಕಣ್ಣು ಎಂಬ ಗಾದೆ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಮಾತಿಗೂ ಮಿಗಿಲಾಗಿ ಪ್ರತಿ ಕ್ಷೇತ್ರಗಳಲ್ಲಿಯೂ ಯಾವ ಪುರಷರಿಗೂ ಕಡಿಮೆ ಇಲ್ಲ ಎಂಬಂತೆ ಮಹಿಳೆಯರು ದುಡಿದು ಸುಂದರ ಬದುಕು ರೂಪಿಸಿಕೊಂಡ ನಿದರ್ಶನಗಳಿವೆ. ಇಂತಹ ನಿದರ್ಶನಗಳ ಪೈಕಿ ಮುಂಡಗೋಡದ ಜ್ಯೋತಿ ಸೂರೆಬಾನ್ ಎಂಬ ಮಹಿಳೆ ಹತ್ತಾರು ಕಷ್ಟಗಳ ನಡುವೆಯೂ ಕೂಲಿ ಮಾಡಿ ಸಾರ್ಥಕ ಬದುಕು ಕಂಡುಕೊಂಡವರು.
ಮುಂಡಗೋಡ ತಾಲೂಕಿನ ಪಾಳಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಹೆಣ್ಣು ಮಗಳು ಎಲ್ಲರಂತೆ ಸುಂದರ ಸಂಸಾರದ ಕನಸು ಕಂಡಿದ್ದಳು. ಮದುವೆಯಾಗಿ 2-3 ವರ್ಷ ಗಂಡ ಕೂಡ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ಕಾಲ ಕಳೆಯುತ್ತಾ ಮದ್ಯ ಸೇವನೆ ಚಟಕ್ಕೆ ಬಲಿಯಾಗಿದ್ದನು. ಗಾರೆ ಕೆಲಸ ಮಾಡುತ್ತಿದ್ದ ಈತ ದಿನ ಕಳೆದಂತೆ ಮದ್ಯದ ಅಮಲಿನಲ್ಲಿ ತೇಲುತ್ತ ಗಾರೆ ಕೆಲಸಕ್ಕೂ ಸರಿಯಾಗಿ ಹೋಗದೇ ಸಂಸಾರ ಸಂಕಷ್ಟಕ್ಕೆ ಸಿಲುಕಿಸಿದ್ದನು.
ಸಂಸಾರದ ನಡೆಸಲು ಕೂಲಿಗೆ ಸಜ್ಜಾದ ಜ್ಯೋತಿ: ಇನ್ನು ಇಬ್ಬರು ಗಂಡು ಮಕ್ಕಳು, ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆ ಸಂಸಾರ ನಡೆಸುವುದು ಕಷ್ಟವಾಗಿತ್ತು. ಕೊನೆಗೆ ಅನಿವಾರ್ಯವಾಗಿ ಈ ಜ್ಯೋತಿ ಸೂರೆಬಾನ್ ಸಂಸಾರದ ನೊಗ ಹೊರುವ ಧೈರ್ಯ ತಾಳಿದ್ದರು. ಅವರಿವರ ಹೊಲಗಳಿಗೆ ಹೋಗಿ ಕೂಲಿ ಮಾಡಿ ನೀಡಿದ ಅಲ್ಪ ಹಣದಲ್ಲಿ ಜೀವನ ನಿರ್ವಹಿಸಲು ಪ್ರಯತ್ನಿಸಿದ್ದಳು. ಆದರೂ ಅದು ಸಾಧ್ಯವಾಗದೇ ಇದ್ದಾಗ ಕೊನೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೊರೆ ಹೋಗಿದ್ದಳು.
ಕೈ ಹಿಡಿದ ಉದ್ಯೋಗ ಖಾತರಿ ಯೋಜನೆ: ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವುದು, ಹೊಸ ಕೆರೆ ನಿರ್ಮಾಣ, ಕಾಲುವೆ ನಿರ್ಮಾಣ ಹಾಗೂ ಇನ್ನಿತರ ಸಾರ್ವಜನಿಕ ಕಾಮಗಾರಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಳೆದ ಆರ್ಥಿಕ ವರ್ಷದಲ್ಲಿ ನೂರು ದಿನಗಳ ಕೆಲಸ ಪಡೆದು ಸೈ ಎನಿಸಿದ್ದಾರೆ. ಅಲ್ಲದೇ ಇಲ್ಲಿ ಕೆಲಸ ಇಲ್ಲದೆ ಇದ್ದಾಗ ಬೇರೆಡೆಯೂ ಕೆಲಸಕ್ಕೆ ತೆರಳಿ ಹಳಿ ತಪ್ಪಿದ ಸಂಸಾರವನ್ನು ಯಥಾಸ್ಥಿತಿಗೆ ತರಲು ಶ್ರಮವಿಸುತ್ತಿದ್ದಾರೆ.
ಹೆಣ್ಣುಮಕ್ಕಳಿಗೆ ನೆರವಾಗಲು ನರೇಗಾ ಕೆಲಸ ಹೆಚ್ಚಿಸಿ: ಗಂಡನ ಕುಡಿತದಿಂದಾಗಿ ಮದುವೆಯಲ್ಲಿ ಅಪ್ಪ ಅಮ್ಮ ನೀಡಿದ ಒಡವೆಗಳೆಲ್ಲವೂ ಮಾರಾಟ ಮಾಡಿದ್ದನು. ಮನೆ ಬಾಡಿಗೆ ಕಟ್ಟಲಾಗದೇ ಅಪ್ಪ ಅಮ್ಮನ ಆಸರೆ ಬೇಡಿದ್ದೆ. ಹೊಟ್ಟೆ ಪಾಡಿಗೆ ಖಾತರಿ ಕೆಲಸಕ್ಕೆ ಮುಂದಾದೆ. ಜೊತೆಗೆ ಅಪ್ಪನೊಂದಿಗೆ ಗಾರೆ ಕೆಲಸದಲ್ಲಿಯೂ ನೆರವಾದೆ. ನರೇಗಾ ಯೋಜನೆ ನಮ್ಮಂತ ಅದೆಷ್ಟೋ ಹೆಣ್ಣುಮಕ್ಕಳಿಗೆ ಕೆಲಸ ಸಿಕ್ಕಿದೆ. ಈ ಕೆಲಸವನ್ನು ಇನ್ನಷ್ಟು ದಿನಗಳವರೆಗೆ ಹೆಚ್ಚಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಜ್ಯೋತಿ ಸೂರೆಬಾನ್.
ಸ್ವಾವಲಂಬಿ ಜೀವನ: ಸ್ವಾಲಂಬನೆ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಜ್ಯೋತಿ ಅವರು ಅಂಬೇಡ್ಕರ್ ನಿವಾಸ್ ಯೋಜನೆಯಡಿ ಸಹಾಯಧನ ಪಡೆದು ತಾವು ದುಡಿದು ಕೂಡಿಟ್ಟ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಪತಿಯ ದುಡಿಮೆಯಲ್ಲಿ ಹೆಜ್ಜೆ ಹಾಕಿ ಸಂಸಾರ ನಡೆಸ ಬೇಕಾದವಳು ಪತಿಯ ಕುಡಿತದ ಚಟದಿಂದಾಗಿ ಕೂಡಿಟ್ಟ ಅಲ್ಪ ಹಣ, ಅಪ್ಪ ಅಮ್ಮಕೊಟ್ಟ ಒಡವೆಗಳು ಗಂಡನ ಪಾಲಾದರೂ ಧೈರ್ಯಗುಂದದೇ ಇದೀಗ ಇಬ್ಬರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಕಷ್ಟಗಳನ್ನು ಮೆಟ್ಟಿನಿಂತು ತನ್ನ ಸಂಸಾರವನ್ನು ಸರಿದಾರಿಯಲ್ಲಿ ಸಾಗಿಸುವ ಮೂಲಕ ಕಷ್ಟ ಎಂದು ಅಂಜುವವರ ಪಾಲಿಗೆ ಮಾದರಿಯಾಗಿದ್ದಾಳೆ.
ಇದನ್ನೂ ಓದಿ: ಸೌಟು ಹಿಡಿಯೋ ಕೈಯಲ್ಲಿ ಟ್ರ್ಯಾಕ್ಟರ್ ಸ್ಟೇರಿಂಗ್.. ಕೃಷಿಯಲ್ಲಿ ರಾಮನಗರ ಶಾಂತಮ್ಮನ ಯಶೋಗಾಥೆ