ಭಟ್ಕಳ: ಕಳೆದ ಮೂರು ವರ್ಷಗಳ ಹಿಂದೆ ಜೆ.ಎನ್.ಯು ವಿಶ್ವವಿದ್ಯಾಲಯದಿಂದ ಕಣ್ಮರೆಯಾಗಿರುವ ನಜೀಬ್ನನ್ನು ಹುಡುಕಿಕೊಡುವಂತೆ ಆಗ್ರಹಿಸಿ ಎಸ್.ಐ.ಒ ಭಟ್ಕಳ ಶಾಖೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ನಂತರ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಎಸ್.ಐ.ಒ ಅಧ್ಯಕ್ಷ ಸನಾವುಲ್ಲಾ ಅಸಾದಿ ಮಾತನಾಡಿ, ನಜೀಬ್ನನ್ನು ಹುಡುಕದೇ ಇದ್ದರೆ ಇಲ್ಲಿರುವ ಪ್ರತಿವೋರ್ವ ವಿದ್ಯಾರ್ಥಿಯೂ ನಜೀಮ್ ಮತ್ತು ರೋಹಿತ್ ವೆಮುಲ್ಲಾ ಅವರಂತೆ ಇದ್ದೇವೆ. ನಜೀಬ್ ಆಹ್ಮದ್ ರನ್ನು ಮರಳಿ ತರಬೇಕು. ನಜೀಮ್ ಮೇಲೆ ಹಲ್ಲೆ ನಡಿಸಿದವರನ್ನು ಬಂಧಿಸಿ ತನಿಖೆ ನಡೆಸಬೇಕು. ಆದಷ್ಟು ಬೇಗ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಇಸ್ಲಾಮಿ ಹಿಂದ್ನ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಮಾತನಾಡಿ, ವಿದ್ಯಾರ್ಥಿಗಳಿಗೆ ಸುರಕ್ಷತೆ ಬೇಕಾಗಿದೆ. ನಾವು ಇಂದು ಪ್ರತಿಭಟನೆಯ ಮೂಲಕ ನಜೀಬ್ನ ವಾಸ್ತವಿಕತೆಯನ್ನು ಜನರ ಮುಂದೆ ತರಬೇಕೆಂದು ಆಗ್ರಹಿಸುತ್ತೇವೆ. ಮೂರು ವರ್ಷಗಳು ಕಳೆದರೂ, ಓರ್ವ ವ್ಯಕ್ತಿಯ ಪತ್ತೆಯನ್ನು ಮಾಡದ ಪೊಲೀಸ್ ಇಲಾಖೆಯ ಮೇಲೆ ನಮಗೆ ಅನುಮಾನ ಮೂಡಿದೆ. ಪ್ರತಿ ವರ್ಷ ತನ್ನ ಜನ್ಮದಿನದಂದು ತಾಯಿಯನ್ನು ಭೇಟಿ ಮಾಡುವ ಪ್ರಧಾನಿಗೆ ನಾವು ನೆನಪಿಸುವುದೇನೆಂದರೆ ಪ್ರತಿವರ್ಷ ನಜೀಬ್ನ ಜನ್ಮದಿನಾಚರಣೆಯಾಗುತ್ತೆ. ಮಗನ ಬರುವಿಕೆಗಾಗಿ ಆತನ ತಾಯಿ ಕಾಯುತ್ತಿದ್ದಾಳೆ. ನಿಮಗೆ ನಿಮ್ಮ ತಾಯಿಯನ್ನು ಕಾಣುವ ಆತುರ ಹೇಗೋ ಹಾಗೆಯೇ ನಜೀಬ್ ತಾಯಿಗೆ ತನ್ನ ಮಗನನ್ನು ಕಾಣುವ ಆತುರವಿದೆ. ಪ್ರಧಾನಿ ಅವರೇ ನಜೀಬ್ ನನ್ನು ಹುಡುಕಿಕೊಡಿ ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.