ಕಾರವಾರ (ಉತ್ತರಕನ್ನಡ) : ಅವರೆಲ್ಲರೂ ಗಂಗಾವಳಿ ನದಿ ಅಬ್ಬರಕ್ಕೆ ಪ್ರತಿಬಾರಿಯೂ ನೆಲೆ ಕಳೆದುಕೊಳ್ಳುತ್ತಿದ್ದವರು. ಈ ಕಾರಣದಿಂದ ಸರ್ಕಾರವೇ ಅವರಿಗೆ ಭೂಮಿ ನೀಡಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿ ಸ್ಥಳಾಂತರ ಮಾಡಿತ್ತು. ಆದರೆ ಇದೀಗ ಸ್ಥಳಾಂತರಗೊಂಡು ಐದು ದಶಕಗಳು ಸಮೀಪಿಸಿದರೂ ಇನ್ನೂ ಕೂಡ ಇಲ್ಲಿನ ಕುಟುಂಬಗಳಿಗೆ ಪಟ್ಟಾ ನೀಡಿಲ್ಲ. ಪರಿಣಾಮ ಬಹುತೇಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ ಅತಿ ಕನಿಷ್ಠ ಮಟ್ಟದಲ್ಲಿ ಬದುಕುವಂತಾಗಿದೆ.
ಹೌದು, ಉತ್ತರಕನ್ನಡದ ವಿಶ್ವಪ್ರಸಿದ್ಧ ತಾಣ ಗೋಕರ್ಣದಿಂದ ಕೆಲವೇ ಕಿ.ಮೀ ಅಂತರದಲ್ಲಿರುವ ಸಣ್ಣ ಬಿಜ್ಜೂರಿನ ಜನ ಕನಿಷ್ಠ ಮೂಲ ಸೌಕರ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ. ಗ್ರಾಮದಲ್ಲಿ ಹರಿಯುತ್ತಿರುವ ಗಂಗಾವಳಿ ನದಿಗೆ ಪದೇ ಪದೆ ಪ್ರವಾಹ ಎದುರಾದಾಗ 1973ರಲ್ಲಿ ಬಿಜ್ಜೂರು ಗ್ರಾಮದ ಬಳಿ ಸರ್ವೆ ನಂಬರ್ 283ರಲ್ಲಿ ಜಾಗ ಮಂಜೂರಿಸಿ ಪ್ಲಾಟ್ಗಳಾಗಿ ವಿಂಗಡಿಸಿ ಜನರಿಗೆ ಕಬ್ಜಾ ನೀಡಲಾಗಿತ್ತು. ಕಾಲೋನಿಯಲ್ಲಿ ಬಹುತೇಕರು ದಲಿತ ಹಾಗೂ ಹಿಂದುಳಿದ ವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸವಿದ್ದರಾದರೂ ಈವರೆಗೂ ಅವರಿಗೆ ಹಕ್ಕು ಪತ್ರ ನೀಡಿಲ್ಲ. ಸರ್ಕಾರ ತಾನು ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದಾಗಿ ಹೇಳಿದರೂ ಇಲ್ಲಿನ ನಿವಾಸಿಗಳಿಗೆ ಮಾತ್ರ ಯಾವುದೇ ಸೌಲಭ್ಯ ತಲುಪದೆ ಇಂದಿಗೂ ಕನಿಷ್ಠ ಮಟ್ಟದ ಜೀವನ ನಡೆಸುವಂತಾಗಿದೆ.
ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ: ಸರ್ಕಾರ ನೀಡಿದ ಗಾಂವಠಾಣಾ ಜಾಗದಲ್ಲಿ ಬಹುತೇಕರು ಸಣ್ಣ ಮನೆ, ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಸರ್ಕಾರದಿಂದ ಮನೆ ಸೇರಿದಂತೆ ಇನ್ನಿತರ ಯಾವುದೇ ದೊಡ್ಡ ಮಟ್ಟದ ಸೌಲಭ್ಯಗಳು ಬಂದರೂ ಸ್ಥಳೀಯ ಗ್ರಾಮ ಪಂಚಾಯಿತಿಯವರು ನಿಮಗೆ ಆರ್‌ಟಿಸಿ ಇಲ್ಲ ಎಂದು ನಿರಾಕರಣೆ ಮಾಡುತ್ತಾರೆ. ನಾವು ಆರ್‌ಟಿಸಿ ಬದಲಾವಣೆಗೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ನಿವಾಸಿ ಮಾಸ್ತಿ ಆಗೇರ್.
ಇನ್ನು ಕಾಲೋನಿಯಲ್ಲಿ ಒಂದಿಷ್ಟು ಮನೆಗಳಿಗೆ ಇನ್ನು ಕೂಡ ವಿದ್ಯುತ್ ಸಂಪರ್ಕ ನೀಡಿಲ್ಲ. ಶೌಚಾಲಯಗಳನ್ನು ನೀಡಿದರೂ ಅವುಗಳ ಕಾಮಗಾರಿ ಕೂಡ ಅರೆಬರೆಯಾಗಿದೆ. ಇತ್ತೀಚೆಗೆ ನೀರಿನ ವ್ಯವಸ್ಥೆ ಕಲ್ಪಿಸಿದರೂ ನೀರು ಕೂಡ ಸರಿಯಾಗಿ ಬರುತ್ತಿಲ್ಲ. ಕೆಲವರಿಗೆ ಪಡಿತರ ಸಿಗುತ್ತಿದ್ದರೇ ಇನ್ನು ಕೆಲವರಿಗೆ ಅದು ಕೂಡ ಸಿಗುತ್ತಿಲ್ಲ. ಬಹುತೇಕರು ಅನಕ್ಷರಸ್ಥರಾಗಿದ್ದು, ಕೂಲಿ ಮಾಡಿ ಜೀವನ ಮಾಡುತ್ತಾರೆ. ನಮ್ಮ ಕೈಲಾದ ಹೋರಾಟ ಮಾಡಿದರೂ ಯಾರೊಬ್ಬರು ಈ ಬಗ್ಗೆ ಗಮನ ಹರಿಸಿಲ್ಲ. ಕಾರಣ ನಾವು ಸೋತು ಇದೀಗ ಇದ್ದ ಮನೆಯಲ್ಲಿಯೇ ಕನಿಷ್ಠ ಮಟ್ಟದ ಜೀವನ ನಡೆಸುವಂತಾಗಿದೆ ಅಂತಾರೆ ಗ್ರಾಮಸ್ತರು.
ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರಿಂದ ಎಚ್ಚರಿಕೆ: ಕಾಲೋನಿ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿವರೆಗೂ ಮನವಿ ಮಾಡಿದ್ದೇವೆ. ಮಾತ್ರವಲ್ಲದೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಮ್ಮ ಶಾಸಕರಿಗೂ ಮನವಿ ಮಾಡಿದ್ದೇವೆ. ಆದರೆ ಯಾರೊಬ್ಬರು ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಸಮುದಾಯಕ್ಕೆ ಸರ್ಕಾರ ಅತಿ ಹೆಚ್ಚು ಸೌಲಭ್ಯ ನೀಡುತ್ತಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದಾಗಿ ಆ ಸೌಲಭ್ಯ ಲಭ್ಯವಾಗದಂತಾಗಿದೆ. ಸರ್ಕಾರ ಚುನಾವಣೆ ಪೂರ್ವದಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೆ ಇದ್ದಲ್ಲಿ ಅನಿವಾರ್ಯವಾಗಿ ಈ ಬಾರಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಇನ್ನು ಈ ಬಗ್ಗೆ ಕುಮಟಾ ತಹಶೀಲ್ದಾರ್ ಆರ್ ವಿ ಕಟ್ಟಿ ಅವರನ್ನು ಸಂಪರ್ಕಿಸಿ ಕೇಳಿದಾಗ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮಕೈಗೊಳ್ಳಲು ಪ್ರಯತ್ನಿಸಲಾಗುವುದು. ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಲಂಚ ಕೊಡಲು ಹಣವಿಲ್ಲವೆಂದು ಎತ್ತುಗಳನ್ನೇ ತಾ. ಪಂ ಕಚೇರಿಗೆ ತಂದ ರೈತ!