ಭಟ್ಕಳ (ಉತ್ತರ ಕನ್ನಡ): ತಾಲೂಕಿನಾದ್ಯಂತ ಕೊರೊನಾ ಮಹಾಮಾರಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ, ಭಟ್ಕಳ ನಗರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ತದನಂತರ ಲಾಕ್ಡೌನ್ ಮಾಡುವಂತೆ ಆದೇಶಿಸಲಾಗಿದೆ.
ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್ ಆದೇಶಿಸಿದ್ದು, ಈ ಅನ್ವಯ, ಸಾರ್ವಜನಿಕರು ವೈದ್ಯಕೀಯ ಕಾರಣಕ್ಕೆ ಬಿಟ್ಟು ಇತರ ಯಾವುದೇ ಕಾರಣಕ್ಕೂ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಹೊರಗಡೆ ಸಂಚರಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಉಳಿದಂತೆ, ಯಾವುದೇ ಕಾರಣಕ್ಕೂ ಭಟ್ಕಳ ಉಪವಿಭಾಗಾಧಿಕಾರಿ ಅಥವಾ ಸಹಾಯಕ ಪೊಲೀಸ್ ಅಧೀಕ್ಷಕರ ಪೂರ್ವಾನುಮತಿ ಪಡೆಯದೇ 70 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಬಹು ರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ವಗೃಹದಿಂದ ಹೊರಗೆ ಬರುವಂತಿಲ್ಲ ಎಂದಿದ್ದಾರೆ.
ಕೊರೊನಾ ರೋಗ ಲಕ್ಷಣ ಹೊಂದಿದ್ದವರು ಕಡ್ಡಾಯವಾಗಿ, ಸರ್ಕಾರ ನಿರ್ದಿಷ್ಟಪಡಿಸಿದ ಫೀವರ್ ಕ್ಲಿನಿಕ್ಗಳಿಗೆ ತೆರಳಿ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ತಪ್ಪಿದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.