ಕಾರವಾರ: ನೆರೆಯ ಗೋವಾ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗುತ್ತಿದ್ದಂತೆ ಗಡಿಜಿಲ್ಲೆ ಉತ್ತರಕನ್ನಡ ಜಿಲ್ಲಾಡಳಿತವೂ ಎಚ್ಚೆತ್ತುಕೊಂಡಿದೆ. ಇಷ್ಟು ದಿನ ಕೇವಲ ಕೇರಳ, ಮಹಾರಾಷ್ಟ್ರದಿಂದ ಬರುತ್ತಿದ್ದವರಿಗೆ ಮಾತ್ರ ಕಡ್ಡಾಯಗೊಳಿಸಿದ್ದ ಆರ್‌ಟಿಪಿಸಿಆರ್ ನಿಯಮವನ್ನ ಇದೀಗ ಗೋವಾದಿಂದ ಬಂದವರಿಗೂ ಜಾರಿಗೊಳಿಸಿದೆ.
ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದಲ್ಲಿ ಮಾತ್ರ ಗಡಿಯಲ್ಲಿ ರಾಜ್ಯಕ್ಕೆ ಪ್ರವೇಶವನ್ನು ನೀಡಲಾಗುತ್ತಿದೆ. ಆರ್‌ಟಿಪಿಸಿಆರ್ ಇಲ್ಲದವರಿಗೆ ವಾಪಸ್ ಕಳುಹಿಸುವ ಕೆಲಸ ಮಾಡುತ್ತಿರೋದರಿಂದ ಮಾಹಿತಿ ಇಲ್ಲದೇ ಬಂದವರು ಪರದಾಡುತ್ತಿದ್ದಾರೆ.
ರೂಪಾಂತರಿ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗೋವಾದಿಂದ ಬರುವವರಿಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ. ಜಿಲ್ಲೆಯ ಗೋವಾ ಗಡಿಯಲ್ಲಿ ಜಿಲ್ಲಾಡಳಿತ ಹದ್ದಿನ ಕಣ್ಣಿರಿಸಿದೆ. ಇಷ್ಟು ದಿನ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುತ್ತಿದ್ದ ವಾಹನಗಳನ್ನು ಮಾತ್ರ ತಡೆದು ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕೇಳಲಾಗುತ್ತಿತ್ತು.
ಆದ್ರೆ ಹೊಸ ವರ್ಷಾಚರಣೆ ಬಳಿಕ ಗೋವಾದಲ್ಲಿ ಏಕಾಏಕಿಯಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇದೀಗ ಗೋವಾ ರಾಜ್ಯವನ್ನೂ ಕೊರೊನಾ ಆತಂಕದ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾಗಿ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ, ಭಟ್ಕಳ ತಾಲೂಕಿನ ಶಿರೂರು, ಜೋಯಿಡಾ ತಾಲೂಕಿನ ಅನಮೋಡ್ ಹಾಗೂ ದಾಂಡೇಲಿಯ ಬರ್ಚಿಯಲ್ಲಿ ಅಂತರಾಜ್ಯ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಕಟ್ಟುನಿಟ್ಟಿನ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ. ಕೊರೊನಾ ಆತಂಕವಿರುವ ರಾಜ್ಯಗಳಿಂದ ಆಗಮಿಸುವವರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇನ್ನು ಬೆಂಗಳೂರು ಹಾಗೂ ನೆರೆಯ ಉಡುಪಿ, ಮಂಗಳೂರಿನಲ್ಲೂ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬರುವವರ ಮೇಲೆ ನಿಗಾ ಇರಿಸಲು ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಮಾವಿನಕೊಪ್ಪ, ಶಿರಸಿ ತಾಲೂಕಿನ ಚಿಪಗಿ, ಯಲ್ಲಾಪುರ, ಮುಂಡಗೋಡ ತಾಲೂಕಿನ ಬಾಚಣಗಿ, ಸಿದ್ದಾಪುರ ತಾಲೂಕಿನ ಚೂರಿಕಟ್ಟೆಯಲ್ಲಿ ಅಂತರಜಿಲ್ಲಾ ಚೆಕ್‌ಪೋಸ್ಟ್‌ಗಳನ್ನ ನಿರ್ಮಿಸಲಾಗಿದೆ.
ಬೆಂಗಳೂರಿನಿಂದ ಜಿಲ್ಲೆಗೆ ಬರುವವರ ಮಾಹಿತಿಯನ್ನೂ ಸಹ ಕಲೆಹಾಕಿ ಅದನ್ನ ಗ್ರಾಮೀಣ ಮಟ್ಟದ ಟಾಸ್ಕ್‌ಫೋರ್ಸ್‌ಗಳಿಗೆ ರವಾನೆ ಮಾಡಲಾಗುತ್ತದೆ. ಬೆಂಗಳೂರಿನಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕಿದ್ದು, ಬಳಿಕ ಅವರ ಸ್ವಾಬ್(ಗಂಟಲು ದ್ರವ) ತೆಗೆದು ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತದೆ. ಜಿಲ್ಲೆಯ ಗೋವಾ ಗಡಿಯಲ್ಲಿ ಆಗಮಿಸಿದ್ದ ಪ್ರತಿಯೊಂದು ವಾಹನಗಳನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ.
ಇದನ್ನೂ ಓದಿ: ಸರ್ಕಾರ ಎಷ್ಟೇ ತಡೆದರು, ನಾವು ಕೋವಿಡ್ ನಿಯಮಗಳೊಂದಿಗೆ ಪಾದಯಾತ್ರೆ ನಡೆಸುತ್ತೇವೆ : ಡಿಕೆಶಿ