ಕಾರವಾರ: ನೂತನ ರೈಲಿಗೆ ಹಸಿರು ನಿಶಾನೆ ತೋರಲು ಬಂದ ರೈಲ್ವೆ ಸಚಿವರ ಎದುರೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜಕೀಯ ಮುಖಂಡರಿಗೆ ಮುಜುಗರ ಉಂಟುಮಾಡಿದ್ದಾರೆ.
ದಾಂಡೇಲಿಯ ಅಂಬೇವಾಡಿಯಿಂದ -ಅಳ್ನಾವರ ಮೂಲಕ ಸಂಚರಿಸುವ ನೂತನ ರೈಲಿಗೆ ಇಂದು ಅಂಬೇವಾಡದ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಾಯಿತು. ಈ ಸಂದರ್ಭ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ ಇನ್ನಿತರ ನಾಯಕರು ವೇದಿಕೆ ಏರಿದ್ದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಆರ್.ವಿ. ದೇಶಪಾಂಡೆ ಪರ ಘೋಷಣೆ ಕೂಗಿದರು. ಆದರೆ, ಇನ್ನೊಂದು ಬದಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪರ ಘೋಷಣೆ ಕೂಗಿದ್ರು.
ಇನ್ನು ವಿಧಾನಪರಿಷತ್ ಸದಸ್ಯ ಎಸ್.ಎಲ್ ಗೋಟ್ನೇಕರ್ ತಮ್ಮ ಭಾಷಣದಲ್ಲಿ ರೈಲ್ವೆ ತರಲು ಪ್ರಯತ್ನಿಸಿದ ದೇಶಪಾಂಡೆ ಅವರ ಪರ ಬ್ಯಾಟಿಂಗ್ ಮಾಡಿದರು. ಆದ್ರೆ, ಈ ವೇಳೆ ಮತ್ತೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಘೋಷಣೆ ಕೂಗಿದರು. ಇದು ಹೀಗೆ ಕೆಲ ಕಾಲ ಮುಂದುವರಿದಾಗ ಪ್ರಹ್ಲಾದ್ ಜೋಶಿ ಮಧ್ಯ ಪ್ರವೇಶಿಸಿ, ಎಲ್ಲರೂ ರೈಲು ತರಲು ಶ್ರಮಿಸಿದ್ದಾರೆ. ಇದು ಒಬ್ಬರಿಂದಾದ ಕೆಲಸ ಅಲ್ಲ. ಇದಕ್ಕೆ ಎಲ್ಲ ಪಕ್ಷದ ನಾಯಕರು ಶ್ರಮಿಸಿದ್ದಾರೆ. ಜನಪ್ರತಿನಿಧಿಗಳಾದವರು ಕೆಲಸ ಮಾಡಿದರೆ ಮಾತ್ರ ಜನ ನಮ್ಮನ್ನು ಈ ಸ್ಥಾನದಲ್ಲಿ ಉಳಿಸುತ್ತಾರೆ. ಯಾರು ಈ ಕುರಿತು ಜಗಳವಾಡಬಾರದು ಎಂದು ಪರಿಸ್ಥಿತಿ ತಿಳಿಗೊಳಿಸಿದರು.