ಶಿರಸಿ: ಪ್ರತಿಪಕ್ಷದವರು ಈಗ ಏನು ಬೇಕಾದರೂ ಮಾತನಾಡಿಕೊಳ್ಳಲಿ, ಅವರಿಗೆ ಮೈದಾನವನ್ನು ಖಾಲಿ ಬಿಟ್ಟಿದ್ದೇನೆ. ಚುನಾವಣೆಯ ನಂತರ ತಕ್ಕ ಉತ್ತರ ನೀಡುತ್ತೇನೆ ಎಂದು ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಸವಾಲು ಹಾಕಿದ್ದಾರೆ.
ಬಿಜೆಪಿ ಸೇರಿದ ನಂತರ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿದ ಹೆಬ್ಬಾರ್ಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ. 5 ರಂದು ಜನತಾ ಜನಾರ್ಧನರ ಕೋರ್ಟ್ ಎದುರು ಹೋಗುತ್ತೇನೆ. ಬಿಜೆಪಿ ಮತ್ತು ನನ್ನ ಕಾರ್ಯಕರ್ತರು ಸೇರಿ ಸಂಘಟಿತ ಹೋರಾಟ ನಡೆಸುತ್ತೇನೆ ಎಂದರು.
ಗೆಲುವು ಖಚಿತ: ಡಿ.9 ಕ್ಕೆ ಪ್ರತಿ ಪಕ್ಷದವರಿಗೆ ಉತ್ತರ ನೀಡುತ್ತೇನೆ. ಅಲ್ಲಿಯವರೆಗೆ ಅವರು ಸಂತೋಷ ಆಗುವಷ್ಟು ಮಾತನಾಡಲಿ. ನನ್ನೊಂದಿಗೆ ಕ್ಷೇತ್ರದ ಜನರಿದ್ದು, 100% ರಷ್ಟು ಗೆದ್ದೇ ಗೆಲ್ಲುತ್ತೇನೆ ಎಂದು ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಚುನಾವಣೆಗೆ ನಿಲ್ಲುವ ನಿರ್ಣಯ ತೆಗೆದುಕೊಂಡಿದ್ದೇವೆ. ಈಗಾಗಲೇ ಬಿ ಫಾರ್ಮ ಸಹ ಸಿಕ್ಕಿದೆ. ಅದರ ಆಧಾರದ ಮೇಲೆ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನಾಯಕತ್ವದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಟೀಲ್ ಅವರ ಮುಂದಾಳತ್ವದಲ್ಲಿ ಬಿಜೆಪಿ ಮತ್ತು ನನ್ನ ಕಾರ್ಯಕರ್ತರನ್ನು ಒಂದುಗೂಡಿಸಿ ಯುದ್ಧಕ್ಕೆ ಸೈನ್ಯವನ್ನು ತಯಾರು ಮಾಡಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ಹೆಬ್ಬಾರ್ ಟಾಂಗ್ ಕೊಟ್ಟರು.