ಕಾರವಾರ: ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದೊಯ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಳ್ಳೂರು ಮಠ ಸಂರಕ್ಷಿತಾರಣ್ಯದಲ್ಲಿ ನಡೆದಿದೆ. ಇದಕ್ಕೆ ಅರಣ್ಯಾಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಗ್ರಾಮ ಅರಣ್ಯ ಸಂರಕ್ಷಣಾ ಸಮಿತಿಯವರು ಆರೋಪಿಸಿದ್ದಾರೆ.
ಹೇಳಿಕೊಳ್ಳಲು ಇದು ಸಂರಕ್ಷಿತ ಅರಣ್ಯ ಪ್ರದೇಶ. ಒಂದು ಮರ ಕಡಿದರೂ ಎರಡು ಚೆಕ್ ಪೋಸ್ಟ್ ಗಳನ್ನು ದಾಟಿ ಹೋಗಬೇಕು. ಹೀಗಿರುವಾಗ ಸದ್ದಿಲ್ಲದೇ ಲಕ್ಷಾಂತರ ಮೌಲ್ಯದ ಮರಗಳು ಕಣ್ಮರೆಯಾಗುತ್ತಿವೆ. ಅರಣ್ಯ ರಕ್ಷಕರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಪ್ರತಿ ಮರವು ಎರಡರಿಂದ ಮೂರು ಲಕ್ಷ ರೂ ಬೆಲೆ ಬಾಳುವಂತಿದೆ.
ಸಿದ್ಧಾಪುರ ಮತ್ತು ಕುಮಟಾಕ್ಕೆ ತೆರಳುವ ಘಟ್ಟಪ್ರದೇಶದ ಹೆದ್ದಾರಿಯ ಎರಡೂ ಕಡೆಗಳಲ್ಲಿ ಅರಣ್ಯ ತಪಾಸಣಾ ಕೇಂದ್ರಗಳಿವೆ. ಆದರೂ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಅರಣ್ಯ ವೀಕ್ಷಕರಿದ್ದರೂ, ಅವರನ್ನು ನರ್ಸರಿ ಕೆಲಸಕ್ಕೆ ಅರಣ್ಯ ಇಲಾಖೆ ನಿಯೋಜಿಸಿದೆ. ಅರಣ್ಯ ವೀಕ್ಷಣೆಗೆ ಯಾವುದೇ ಅಧಿಕಾರಿಗಳು ಬರುತ್ತಿಲ್ಲ. ರಾತ್ರಿ ವೇಳೆಯೂ ಯಾವುದೇ ಗಸ್ತು ವ್ಯವಸ್ಥೆ ಇಲ್ಲವಾಗಿದ್ದು, ಮರಗಳ್ಳರಿಗೆ ಅನುಕೂಲ ಮಾಡಿಕೊಟ್ಟಂತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿಯ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.
ರಕ್ಷಿತಾರಣ್ಯ ಪ್ರದೇಶದಲ್ಲಿನ ಮರಗಳನ್ನು ಸ್ಥಳಿಯರೇ ಕಡಿದು ಬಳಕೆ ಮಾಡಿದ್ದಾರೆ. ಈಗಾಗಲೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಚೆಕ್ ಪೋಸ್ಟ್ ಗಳ ಭದ್ರತೆ ಉತ್ತಮವಾಗಿದ್ದು ಮರಗಳ ಸಾಗಾಟ ನಡೆದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.
ಇದನ್ನೂ ಓದಿ: ಕಾರವಾರ: ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯನ್ನು ಹೊತ್ತೊಯ್ದ ಮೊಸಳೆ