ಕಾರವಾರ: ಹಳಿಯಾಳ-ಜೊಯಿಡಾದಲ್ಲಿ ಅಕ್ರಮ ಮರಳು ಗಣಿಗಾರಿಕೆ ಜೋರಾಗಿದ್ದು, ಕಾಳಿ ನದಿಯಿಂದ ರಾಜಾರೋಷವಾಗಿ ಮರಳು ತೆಗೆದು ಹೊರ ಜಿಲ್ಲೆಗಳಿಗೆ ಸಾಗಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಹೌದು, ಕಳೆದ ವರ್ಷ ಸುರಿದ ಮಹಾ ಮಳೆಯಿಂದಾಗಿ ಹಳಿಯಾಳ, ದಾಂಡೇಲಿ, ಜೋಯಿಡಾ ಮತ್ತು ರಾಮನಗರದ ಹಳ್ಳ, ತೊರೆ, ನದಿಗಳಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಮರಳು ಕಾಳಿ ನದಿಯಲ್ಲಿ ಸಂಗ್ರಹವಾಗಿದೆ. ಹೀಗೆ ನಿಸರ್ಗದತ್ತವಾಗಿ ಬಂದು ಬಿದ್ದಿದೆ. ಈ ಮರಳನ್ನು ಸರ್ಕಾರಕ್ಕೆ ರಾಜಧನ ತುಂಬದೇ ಯಾವುದೇ ಅನುಮತಿ ಪಡೆಯದೆ ಪ್ರತಿನಿತ್ಯ ಕಾಳಿ ನದಿ ಮತ್ತು ಅದರ ಉಪ ನದಿಗಳಾದ ನಾಗಿ, ನಾಶಿ, ಪಾಂಡ್ರಿ, ದುಸಗಿ, ಕಾನೇರಿಯಲ್ಲಿ ದಂಧೆಕೋರರು ಲೂಟಿ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು ಅಕ್ರಮಮರಳುಗಾರಿಕೆ ಮತ್ತು ಸಾಗಾಣಿಕೆ ದಂಧೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಈಗಾಗಲೇ ಒತ್ತಾಯಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಲೂಟಿಕೋರರ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಪ್ರತಿನಿತ್ಯ 20 ರಿಂದ 25 ಲಾರಿ ಟಿಪ್ಪರ್ಗಳಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಅಲ್ಲದೇ ಇದೇ ಮರಳನ್ನು ಹಳಿಯಾಳದ ವಿವಿಧೆಡೆ ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಇಲ್ಲಿ ತೆಗೆದ ಮರಳನ್ನು ತುಂಬಿಕೊಂಡು ಲಾರಿಗಳು ದಾಂಡೇಲಿ, ಬರ್ಚಿ ಮೂಲಕ ಕರ್ಕಾದಲ್ಲಿರುವ ಅರಣ್ಯ ಇಲಾಖೆ ಚೆಕ್ಪೊಸ್ಟ್ನ್ನು ಸಲಿಸಾಗಿ ದಾಟುತ್ತಿವೆ. ಯಲ್ಲಾಪುರ ನಾಕೆ ಮಾರ್ಗವಾಗಿ ಧಾರವಾಡ, ಹುಬ್ಬಳ್ಳಿ, ಅಳ್ನಾವರ ಹೀಗೆ ವಿವಿಧ ಜಿಲ್ಲೆಗಳಿಗೆ ಕಳ್ಳ ಸಾಗಾಣೆ ಮಾಡಲಾಗುತ್ತಿದೆ.
ಇಷ್ಟೊಂದು ದೊಡ್ಡಮಟ್ಟದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದರು ಸಹ ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಜನಪ್ರತಿನಿಧಿಗಳು ಮೌನವಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.