ಭಟ್ಕಳ: ಬೆಳಕೆ ಗ್ರಾಮ ಪಂಚಾಯಿತಿ ಗೊರ್ಟೆ ವ್ಯಾಪ್ತಿಯಲ್ಲಿ ಹೋಟೆಲ್ ನೆಪದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೆಲವು ತಿಂಗಳುಗಳ ಹಿಂದೆ ಗೊರ್ಟೆಯಲ್ಲಿ ಚಂದ್ರಿಕಾ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೋಟೆಲ್‍ಗೆ ಮಾಲೀಕರು ತಾತ್ಕಾಲಿಕ ಪರವಾನಗಿ ಪಂಚಾಯತ್ನಿಂದ ಪಡೆದುಕೊಂಡಿದ್ದರು. ಆದರೆ, ಹೋಟೆಲ್ನಲ್ಲಿ ಹಾಲಿಯಾಗಿ ಅಕ್ರಮವಾಗಿ ಬಾರ್ ಎಂಡ್ ರೆಸ್ಟೋರೆಂಟ್ ಪ್ರಾರಂಭಿಸಲಾಗಿತ್ತು. ಅಲ್ಲದೇ, ಶಾಲೆಯ ಸಮೀಪ ನಿರ್ಮಿಸಲಾಗಿದೆ. ಈ ಕುರಿತು ಸ್ಥಳೀಯರು ಗ್ರಾಪಂಗೆ ಮನವಿ ಸಲ್ಲಿಸಿದರು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಪಂಚಾಯಿತಿಗೆ ಸಾರ್ವಜನಿಕರು ಮುತ್ತಿಗೆ ಹಾಕಿದರು. ಸಾರ್ವಜನಿಕರು ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸಲೇಬೇಕೆಂದು ಪಟ್ಟು ಹಿಡಿದಿದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಈ ಮಧ್ಯೆ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶನಾಯ್ಕ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು.
ಗ್ರಾಪಂ ಅಧ್ಯಕ್ಷ ರಮೇಶ ನಾಯ್ಕ, ಗ್ರಾಪಂನಿಂದ ಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ಪರವಾನಗಿ ನೀಡಿಲ್ಲ. ಗ್ರಾಪಂಗೆ ಮಾಹಿತಿ ನೀಡದೇ ಅಬಕಾರಿ ಇಲಾಖೆ ಮತ್ತು ಜಿಲ್ಲಾಧಿಕಾರಿ ಪರವಾನಗಿ ಕೊಟ್ಟಿದ್ದಾರೆ. ಈ ಬಗ್ಗೆ ಪಂಚಾಯತ್ ಸದಸ್ಯರೊಟ್ಟಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.
ಅಕ್ರಮ ಬಾರ್ ಮತ್ತು ರೆಸ್ಟೋರೆಂಟ್‍ನಿಂದ ಕುಡುಕರ ಹಾವಳಿ ಹೆಚ್ಚಾಗಿದೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಬಾರ್ ಈ ಕೂಡಲೇ ಮುಚ್ಚಬೇಕು. ಪಂಚಾಯಿತಿ ವ್ಯಾಪ್ತಿಯ ಎಲ್ಲ ಅಕ್ರಮ ಮದ್ಯ ಮಾರಾಟ ಅಂಗಡಿಗಳೂ ಬಂದ್ ಆಗಬೇಕು. ಇಲ್ಲವಾದಲ್ಲಿ ನಾವು ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಸಿದರು.