ಕಾರವಾರ : ಬಹುಭಾಗ ಅರಣ್ಯ ಪ್ರದೇಶಗಳಿಂದಲೇ ಕೂಡಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಗುಡ್ಡ ಕುಸಿತಗಳು ಸಂಭವಿಸುತ್ತಲೇ ಇರುತ್ತವೆ. ಜಿಲ್ಲೆಯಲ್ಲಿ ಒಟ್ಟು 439 ಪ್ರದೇಶಗಳಲ್ಲಿ ಗುಡ್ಡ ಕುಸಿಯುವ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮಾಹಿತಿ ನೀಡಿದ್ದು, ಈ ಬೆನ್ನಲ್ಲೇ ಜಿಲ್ಲಾಡಳಿತವು 185 ಕೋಟಿ ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಅಂದಾಜು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.
ಹೌದು, ಶೇಕಡಾ 80 ರಷ್ಟು ಅರಣ್ಯ ಪ್ರದೇಶದಿಂದಲೇ ಕೂಡಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶಗಳೇ ಹೆಚ್ಚು. ಅದರಲ್ಲಿಯೂ ಪ್ರತಿ ಮಳೆಗಾಲದಲ್ಲಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಗುಡ್ಡ ಕುಸಿತಗಳು ಸಂಭವಿಸುತ್ತಲೇ ಇರುತ್ತದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಯಲ್ಲಾಪುರದ ಕಳಚೆ, ಕುಮಟಾದ ತಂಡ್ರಕುಳಿ, ಭಟ್ಕಳದ ಮುಠಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ಪ್ರಾಣಹಾನಿ ಜೊತೆಗೆ ಆಸ್ತಿಪಾಸ್ತಿಗೂ ಹಾನಿಯಾಗಿತ್ತು. ಇದು ಪ್ರತಿ ವರ್ಷವೂ ಮುಂದುವರಿಯುತ್ತಿದ್ದ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಜಿಲ್ಲೆಯಲ್ಲಿ ಕುಸಿಯಬಹುದಾದ ಭೂಪ್ರದೇಶಗಳ ಬಗ್ಗೆ ಸರ್ವೆ ನಡೆಸಿದ್ದು, ಜಿಲ್ಲಾದ್ಯಂತ ಸುಮಾರು 439 ಪ್ರದೇಶಗಳನ್ನು ಪತ್ತೆ ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತ್ತು.
ಅದರಂತೆ, ಜಿಲ್ಲಾಡಳಿತ ಕೂಡ ಈ ಪ್ರದೇಶಗಳಲ್ಲಿ ಶಾಶ್ವತವಾಗಿ ಗುಡ್ಡ ಕುಸಿಯದಂತೆ ತಡೆಯುವ ನಿಟ್ಟಿನಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ತಡೆಗೋಡೆ ನಿರ್ಮಾಣ ಮಾಡಿ, ಶಾಶ್ವತವಾಗಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸುಮಾರು 185 ಕೋಟಿ ವೆಚ್ಚದ ಅಂದಾಜು ಪ್ರತಿ ತಯಾರಿಸಲಾಗಿದೆ. ಅಲ್ಲದೇ, ಈ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, ಗುಡ್ಡ ಕುಸಿತದಿಂದ ಆಗಬಹುದಾದ ಹಾನಿ ತಪ್ಪಿಸಲು ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಇದನ್ನೂ ಓದಿ : ರೆಡ್ ಅಲರ್ಟ್ ಬೆನ್ನಲ್ಲೇ ಭಾರಿ ಮಳೆ : ಅಣಶಿ ಘಟ್ಟ, ಬಂಟ್ವಾಳದಲ್ಲಿ ಕುಸಿದ ಗುಡ್ಡ
ಇನ್ನು ಗುಡ್ಡಗಾಡು ಪ್ರದೇಶ ಹೆಚ್ಚಾಗಿರುವ ಜಿಲ್ಲೆಯಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಗುರುತಿಸಿರುವ ಪ್ರದೇಶಗಳ ಪೈಕಿ ಜನವಸತಿ ಪ್ರದೇಶಗಳು ಸೇರಿವೆ. ಅಲ್ಲದೇ, ನಿತ್ಯ ಸಾವಿರಾರು ಮಂದಿ ಪ್ರಯಾಣಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಒಂದೊಮ್ಮೆ ಕಾಮಗಾರಿ ಕೈಗೊಳ್ಳದೆ ಹಾಗೆ ಬಿಟ್ಟಲ್ಲಿ ಹೆದ್ದಾರಿ ಸಂಪರ್ಕ ಕೂಡ ಕಡಿತಗೊಳ್ಳುವ ಸಾಧ್ಯತೆ ಇದೆ. ಸರ್ಕಾರವು ಜಿಲ್ಲಾಡಳಿತ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯನ್ನು ಕೂಡಲೇ ಪರಿಶೀಲಿಸಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡಬೇಕು. ಹೀಗೆ ನೀಡುವುದರಿಂದ ಆಯಾ ಪ್ರದೇಶಗಳಲ್ಲಿ ಸಂಭವಿಸಬಹುದಾದ ಹಾನಿಯನ್ನು ತಡೆಗಟ್ಟಬಹುದು. ಮಾತ್ರವಲ್ಲದೇ, ಭಯದಲ್ಲಿ ಬದುಕುತ್ತಿರುವ ಜಿಲ್ಲೆಯ ಜನರ ಸಂಕಷ್ಟವನ್ನು ಪರಿಹಾರ ಮಾಡಲು ಅನುದಾನ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಾರವಾರದ ಟನಲ್ ಬಳಿ ಗುಡ್ಡ ಕುಸಿತ: ಹೆದ್ದಾರಿ ಸಂಚಾರ ಅಸ್ತವ್ಯಸ್ತ- ವಿಡಿಯೋ
ಒಟ್ಟಾರೆ, ಜಿಲ್ಲೆಯಲ್ಲಿ ಸಂಭವಿಸಬಹುದಾದ ಗುಡ್ಡಕುಸಿತದ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕಾರ್ಯಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿ ಜನರಿಗೆ ನೆಮ್ಮದಿಯ ಜೀವನ ನಡೆಸುವಂತೆ ಮಾಡಿಕೊಡಬೇಕಿದೆ.