ಶಿರಸಿ: ನನ್ನ ಮಗ 6 ವರ್ಷದಿಂದ ನಮ್ಮೊಂದಿಗೆ ಇಲ್ಲ. 2008ರಲ್ಲಿ ಅವನು ಮನೆಯಲ್ಲಿ ಇಲ್ಲದಾಗ ನಾನು ಶಾಸಕನಾಗಿದ್ದೆ. 2013 ಮತ್ತು 2018ರಲ್ಲಿ ಅವನು ಇದ್ದಾಗ ಸೋಲು ಅನುಭವಿಸಿದೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ತಮ್ಮ ಮಗ ಬಾಪುಗೌಡ ಪಾಟೀಲ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಮುಂಡಗೋಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಗನ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗೆ ಏನೂ ಸಮಸ್ಯೆಯಿಲ್ಲ. ಲಿಂಗಾಯತ ಮತಗಳು ವಿಭಜನೆ ಆಗುವುದಿಲ್ಲ. ಅವರ ನಾಯಕರೇ ಮುಖ್ಯಮಂತ್ರಿ ಇರುವಾಗ ಮತಗಳು ಬೇರೆಡೆಗೆ ಹೋಗುವುದಿಲ್ಲ. 17 ಮಂದಿ ಬಂದಿರುವ ಕಾರಣ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾರೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.