ಕಾರವಾರ (ಉತ್ತರ ಕನ್ನಡ): ಸಂಸದ ಅನಂತಕುಮಾರ್ ಹೆಗಡೆ ಅವರು ಸಾಯಲಿ ಅಥವಾ ಸತ್ತರೆ ಒಳ್ಳೆಯದು ಎಂದು ನಾನು ಹೇಳಿಲ್ಲ. ಜನ 25 ವರ್ಷ ಲೋಕಸಭೆಗೆ ಆಯ್ಕೆ ಮಾಡಿದರೂ ಏನೂ ಕೆಲಸ ಮಾಡದ ಕಾರಣ ಅವರು ಇದ್ದರೂ ಒಂದೇ ಇಲ್ಲದೇ ಇದ್ದರೂ ಒಂದೇ ಎಂದು ಹೇಳಿದ್ದೇನೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸ್ಪಷ್ಟನೆ ನೀಡಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಮಾಧ್ಯಮಗೋಷ್ಠಿ ಮಾಡಿ ಮಾತನಾಡಿದ ಅವರು, ಕಳೆದ ಎರಡು ದಿನದ ಹಿಂದೆ ಮಾತನಾಡುವಾಗ ನಾನು, ಸಂಸದ ಅನಂತಕುಮಾರ್ ಹೆಗಡೆಯನ್ನು ಐದು ಬಾರಿ ಲೋಕಸಭೆಗೆ ಆರಿಸಿ ಕಳುಹಿಸಿದರು. ಉತ್ತರ ಕನ್ನಡ ಜಿಲ್ಲೆಗೆ ಒಂದೇ ಒಂದು ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡಿಲ್ಲ. ಆದ್ದರಿಂದ ಅವರು ಇದ್ದರೂ ಒಂದೇ ಇಲ್ಲದೇ ಇದ್ದರೂ ಒಂದೇ ಎಂದು ಹೇಳಿದ್ದೇನೆ. ಆದರೆ ಅವರ ಮರಿ ಪುಡಾರಿಗಳು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಬಿಜೆಪಿ ಪಕ್ಷದಲ್ಲಿದ್ದು, ಮಂತ್ರಿಯಾಗಿ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೆ. ಆದರೆ ಅವರ ಸಾವನ್ನು ಬಯಸಿಲ್ಲ ಎಂದು ಹೇಳಿದರು.
ನಾನು ನರೇಂದ್ರ ಮೋದಿ ಅವರ ಅಭಿಮಾನಿ. ಅವರ ಮಟ್ಟದಲ್ಲಿ ಯಾರೂ ಬೆಳೆದಿಲ್ಲ. ಮೋದಿ ಅವರಿಂದ ದೇಶದಲ್ಲಿ ವಿರೋಧ ಪಕ್ಷವೇ ಇಲ್ಲ ಎಂಬಂತಾಗಿದೆ. ಆದರೆ ಅನಂತಕುಮಾರ್ ಅವರೇ ಪಕ್ಷಕ್ಕೆ ಮುಜುಗರ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಪ್ರಧಾನಿ ನರೇಂದ್ರ ಮೋದಿ ಸಂಸತ್ನಲ್ಲಿ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಮುಂದಿನ ಸಂಸತ್ ಚುನಾವಣೆಯಲ್ಲಿ ಅನಂತಕುಮಾರ್ ಅವರಿಗೆ ಟಿಕೆಟ್ ಸಿಗುವುದಿಲ್ಲ. ಇದನ್ನು ಅವರ ಪಕ್ಷದವರೇ ಹೇಳಿದ್ದಾರೆ ಎಂದು ಹೇಳಿದರು.
ನನ್ನ ವಿರುದ್ಧ ಮಾತನಾಡುವ ಬಿಜೆಪಿ ಮುಖಂಡರು ಅನಂತಕುಮಾರ್ ಜಿಲ್ಲೆಗಾಗಿ ಏನು ಮಾಡಿದ್ದಾರೆ ಎಂದು ಹೇಳಲಿ. ನಾನು ಯಾರಿಗೂ ಹೆದರೋ ಮನುಷ್ಯನಲ್ಲ. ಹಿಂದೆ ಯಡಿಯೂರಪ್ಪ ಅವರ ವಿರುದ್ಧ ನಿಂತು ಹೋರಾಟ ಮಾಡಿದ್ದೇನೆ. ನನ್ನ ವರ್ತನೆಯನ್ನು ಅವರ ವರ್ತನೆಗೆ ಹೋಲಿಸಲು ಹೋಗಬೇಡಿ. ನನ್ನ ಮಾನಸಿಕ ಸ್ಥಿತಿ ಸರಿಯಾಗಿಯೇ ಇದೆ ಎಂದರು.