ಭಟ್ಕಳ: ತಾಲೂಕಿನ ಸಾಗರ ರಸ್ತೆಯಲ್ಲಿರುವ ನಿರ್ಮಾಣ ಹಂತದ ಪುರಭವನ ಕಟ್ಟಡದಿಂದ ಜಿಗಿದು ಗೃಹಿಣಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿಯನ್ನು ಭಟ್ಕಳ ಹಾಡವಳ್ಳಿ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಪತ್ನಿ ಎಂದು ತಿಳಿದು ಬಂದಿದೆ. ಪತಿ-ಪತ್ನಿ ಇಬ್ಬರು ಬೆಳಗಾವಿ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರು ಶನಿವಾರ ತಾಲೂಕಿನ ಖಾಸಗಿ ಆಸ್ಪತ್ರೆಗೆ ಪತಿಯೊಂದಿಗೆ ಚಿಕಿತ್ಸೆಗೆಂದು ಬಂದಿದ್ದರು. ಪತಿ ಔಷಧಿ ತೆಗೆದುಕೊಳ್ಳುವ ವೇಳೆ ಆಸ್ಪತ್ರೆಯ ಹೊರಗಡೆ ಫೋನ್ನಲ್ಲಿ ಮಾತನಾಡುತ್ತಿದ್ದ ಪತ್ನಿ ಏಕಾಏಕಿ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಮಹಿಳೆ ಸಾಗರ ರಸ್ತೆಯ ಸಮೀಪದ ನಿರ್ಮಾಣ ಹಂತದಲ್ಲಿರುವ ಪುರಸಭೆ ಪುರಭವನದ ಕಟ್ಟಡವೇರಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ವೇಳೆ ಅಲ್ಲಿನ ಸ್ಥಳೀಯರು, ಆಟೋ ರಿಕ್ಷಾ ಚಾಲಕರು ಆ ಮಹಿಳೆಯನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಪತ್ನಿಯ ಹುಡುಕಾಟದಲ್ಲಿದ್ದ ಪತಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪತಿ ಪತ್ನಿಯ ಸ್ಥಿತಿಯನ್ನು ಕಂಡು ಮರುಗಿದ್ದಾನೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪಿಎಸ್ಐ ಸುಮಾ ಹಾಗೂ ಎಎಸ್ಐ ಗೋಪಾಲ ನಾಯ್ಕ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಆರ್ಎಫ್ಓ ಸವಿತಾ ದೇವಾಡಿಗ ಅವರಿಗೆ ಮಾಹಿತಿ ತಿಳಿದು ಆಸ್ಪತ್ರೆಗೆ ಧಾವಿಸಿ ಮಹಿಳೆಯ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಆಕೆಯನ್ನು ಸಂತೈಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಭಿಕ್ಷುಕರನ್ನು ನಿರ್ದಯವಾಗಿ ಥಳಿಸಿದ ಪೊಲೀಸ್ : ವಿಡಿಯೋ ವೈರಲ್