ಭಟ್ಕಳ: ತಾಲೂಕಿನಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದೆ. ಕಿದ್ವಾಯಿ ರೋಡ್, ಫಿರ್ದೋಸ್ ನಗರ, ಹೆಬಳೆ ರೋಡ್ ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಕಿದ್ವಾಯಿ ರಸ್ತೆಯ ಮಸೀದಿ ಸಮೀಪ ಅಲ್ಹಿಜಾಜ್ ಅವರ ಅದ್ವಾನ್ ರುಕ್ಕುದ್ದೀನ್ ಮನೆಯ ಬಚ್ಚಲು ಮನೆಯ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು, ಸುಮಾರು 1 ಲಕ್ಷ ರೂ. ಹಣವನ್ನು ಕದ್ದೊಯ್ದಿದ್ದಾರೆ. ಮನೆ ಮಾಲೀಕ ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ಕೃತ್ಯ ನಡೆದಿದೆ.
ಇದೇ ರೀತಿ ಹೆಬಳೆಯ ಫೀರ್ದೊಸ್ ನಗರದ ಸೈಯದ್ ಇಬ್ರಾಹಿಂ ಎಂಬುವರ ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು, ಸುಮಾರು 30 ಸಾವಿರ ರೂ ಹಣ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ವಿವಿಧೆಡೆ ಮನೆ ಕಳ್ಳತನ ನಡೆಯುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಕರಣವನ್ನ ಕೈಗೆತ್ತಿಕೊಂಡಿರುವ ಠಾಣಾ ಸಿಬ್ಬಂದಿ, ತನಿಖೆ ನಡೆಸುತ್ತಿದ್ದಾರೆ.