ಭಟ್ಕಳ: ಪಟ್ಟಣದಲ್ಲಿ ಕೊರೊನಾ ತಂದಿಟ್ಟಿರುವ ಸಂಕಷ್ಟದ ನಡುವೆಯೂ ಭಟ್ಕಳ ಪೌರಕಾರ್ಮಿಕರು ಎದೆಗುಂದದೆ ತಮ್ಮ ಪ್ರಾಮಾಣಿಕ ಕರ್ತವ್ಯ ಪಾಲನೆ ಮಾಡಲು ನಿಂತು ಮನೆ-ಮನೆಗೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿ ಇತರೆ ಮಹತ್ವದ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ತಾಲೂಕಿನ ಜಾಲಿ ಪ.ಪಂ ಮತ್ತು ಭಟ್ಕಳ ಪುರಸಭೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.
ಒಂದು ಹಂತದಲ್ಲಿ ಭಟ್ಕಳ ಪಟ್ಟಣ ವ್ಯಾಪ್ತಿ ಕಂಟೈನ್ಮೆಂಟ್ ಝೋನ್ ಆಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಆರಂಭದಲ್ಲಿ ಕೊರೊನಾ ಕುರಿತು ಅನೇಕ ಉಹಾಪೋಹಗಳಿದ್ದು, ಯಾವುದು ಮಾಡಬೇಕು, ಮಾಡಬಾರದು ಎನ್ನುವ ಆತಂಕ ಜನರಲ್ಲಿತ್ತು.
ಕೊರೊನಾ ವಾರಿಯರ್ಸ್ಗೆ ಪ್ರಶಂಸೆ ಅಧಿಕಾರಿಗಳಲ್ಲಿಯೂ ಕೊರೊನಾ ಬಗ್ಗೆ ಭಯ ಹಾಗೂ ಅದರ ಕಡಿವಾಣಕ್ಕೆ ಸೂಕ್ತ ಕ್ರಮದ ಬಗ್ಗೆ ಭಾರೀ ಚರ್ಚೆಯಾದ ನಡುವೆಯೂ ಪ್ರಕರಣ ಕಂಡು ಬಂದ ಮನೆಗಳಿಗೆ ಪೌರಕಾರ್ಮಿಕರು ಅಧಿಕಾರಿಗಳ ಸೂಚನೆಯ ಮೇರೆಗೆ ತೆರಳಿ ಔಷಧಿ ಸಿಂಪಡಣೆ ಮಾಡಿದ್ದರು. ಜನರಲ್ಲಿ ಜಾಗೃತಿ ಮೂಡಿಸಿ, ಪ್ರಕರಣ ಪತ್ತೆಯಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಜಾಲಿ ಪ.ಪಂ ಮತ್ತು ಪುರಸಭೆ ಮಹತ್ವದ ಕಾರ್ಯನಿರ್ವಹಿಸಿದೆ. ಪರಿಣಾಮ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ನವದೆಹಲಿ ಪ್ರಶಂಸೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿದೆ.ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಟಿ.ದೇವರಾಜು, ಜಾಲಿ ಪ.ಪಂ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ ವೈಯಕ್ತಿಕವಾಗಿ ಪ್ರಶಂಸನಾ ಪತ್ರ ಪಡೆದಿದ್ದಾರೆ.