ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿನ ಹತ್ತು ಹಲವು ಪ್ರವಾಸಿ ಸ್ಥಳಗಳು ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಾಗಿವೆ. ಇದರೊಂದಿಗೆ ವಿಶಾಲವಾಗಿರುವ ಕಡಲ ತೀರಗಳು ದೇಶ, ವಿದೇಶಿ ಪ್ರವಾಸಿಗರನ್ನೂ ತನ್ನತ್ತ ಕೈಬೀಸಿ ಕರೆಯುತ್ತವೆ. ಕಳೆದ ವರ್ಷವಷ್ಟೇ ಜಿಲ್ಲೆಯ ಕಡಲ ತೀರವೊಂದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಲಭಿಸಿದ್ದು, ಈ ಬಾರಿ ಸಹ ತನ್ನ ಗುಣಮಟ್ಟವನ್ನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕರಾವಳಿ ಜಿಲ್ಲೆ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕಾಸರಕೋಡ್‌ನಲ್ಲಿ ಜಿಲ್ಲಾಡಳಿತ ಇಕೋ ಬೀಚ್‌ನ ನಿರ್ಮಾಣ ಮಾಡಿತ್ತು. ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನ ಮಾಡುವ ಮೂಲಕ ಕಡಲ ತೀರವನ್ನ ಪ್ರವಾಸೋದ್ಯಮ ಸ್ನೇಹಿಯಾಗಿ ನಿರ್ಮಾಣ ಮಾಡಿತ್ತು.
ಈ ಮೂಲಕ ಕಳೆದ ವರ್ಷವಷ್ಟೇ ಜಿಲ್ಲೆಯ ಇಕೋ ಕಡಲ ತೀರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಲಭಿಸಿದೆ. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವಂತಾಗಿತ್ತು. ಈ ಬಾರಿಯೂ ಸಹ ಇಕೋ ಬೀಚ್ ತನ್ನ ಗುಣಮಟ್ಟವನ್ನ ಕಾಯ್ದುಕೊಂಡಿದೆ. ಆ ಮೂಲಕ ಮತ್ತೊಮ್ಮೆ ಬ್ಲೂ ಫ್ಲ್ಯಾಗ್ ಹಾರಾಟಕ್ಕೆ ಅನುಮತಿ ಪಡೆದಿದೆ.
ಇಕೋ ಕಡಲ ತೀರದಲ್ಲಿ ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ ಕಳೆದ ವರ್ಷ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡಿತ್ತು. ಕಡಲ ತೀರದ ಸುಮಾರು 750 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ವಿನೂತನ ಬಗೆಯ ಆಸನ ವ್ಯವಸ್ಥೆ, ವಾಚ್ ಟವರ್, ಕುಡಿಯುವ ನೀರು, ಶೌಚಾಲಯ ಸೇರಿ ಪರಿಸರ ಸ್ನೇಹಿ ಸೌಲಭ್ಯಗಳ ವ್ಯವಸ್ಥೆಯನ್ನ ಮಾಡಲಾಗಿದೆ.
ಇದರೊಂದಿಗೆ ಮಕ್ಕಳ ಆಟಿಕೆಗಳನ್ನ ಸಹ ಅಳವಡಿಸಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟವನ್ನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಡಲ ತೀರದಲ್ಲಿ ಸ್ವಚ್ಛತೆ ಸಹ ಕಾಯ್ದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇಕೋ ಕಡಲ ತೀರಕ್ಕೆ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿತ್ತು. ಈ ಬಾರಿ ಸಹ ಜಿಲ್ಲಾಡಳಿತ ಕಡಲ ತೀರದಲ್ಲಿನ ವ್ಯವಸ್ಥೆಯನ್ನ ಉತ್ತಮ ರೀತಿ ನಿರ್ವವಹಿಸಿದ ಪರಿಣಾಮ ಈ ವರ್ಷವೂ ಇಕೋ ಕಡಲ ತೀರದಲ್ಲಿ ಬ್ಲೂ ಫ್ಲ್ಯಾಗ್ ಹಾರಾಡಲಿದೆ.
ಕಳೆದ ವರ್ಷ ಕೊರೊನಾ ಮೊದಲನೇ ಅಲೆಯ ಬಳಿಕ ಸಾಕಷ್ಟು ಪ್ರವಾಸಿಗರು ಬ್ಲೂ ಫ್ಲ್ಯಾಗ್ ಕಡಲ ತೀರಕ್ಕೆ ಭೇಟಿ ನೀಡಿದ್ದರು. ಕುಟುಂಬಸ್ಥರು, ಮಕ್ಕಳು ಸಹ ಕಡಲ ತೀರಕ್ಕೆ ಆಗಮಿಸಿ ಎಂಜಾಯ್ ಮಾಡಲು ಅನುಕೂಲಕರ ವಾತಾವರಣ ಇರುವುದರಿಂದಾಗಿ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಜೊತೆಗೆ ಕಡಲತೀರದ ನಿರ್ವಹಣೆಗಾಗಿಯೇ ಸಿಬ್ಬಂದಿ ನಿಯೋಜನೆ ಮಾಡಿರೋದು ಪ್ರತಿ ನಿತ್ಯ ಬೀಚ್‌ನ ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಪ್ರವಾಸಿಗರ ಸುರಕ್ಷತೆಗೂ ಇದರಿಂದ ಅನುಕೂಲವಾಗಿತ್ತು. ಈ ಬಾರಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ವೇಳೆ ಕಡಲತೀರದ ಒಂದು ಬದಿಗೆ ಕೊಂಚ ಹಾನಿಯಾಗಿತ್ತಾದರೂ ಇಲ್ಲಿನ ಸಿಬ್ಬಂದಿ ಕಡಲತೀರವನ್ನ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡಿದ್ದರು.
ಈ ಹಿನ್ನೆಲೆ ಈ ಬಾರಿಯೂ ಸಹ ಕಡಲತೀರಕ್ಕೆ ಬ್ಲೂ ಫ್ಲ್ಯಾಗ್ ಮನ್ನಣೆ ಲಭಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಖ್ಯಾತಿಯನ್ನ ಹೆಚ್ಚಿಸುವಂತಾಗಿದೆ. ಕೊರೊನಾ ಅಬ್ಬರದಿಂದಾಗಿ ಮಂಕಾಗಿರುವ ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಇದರಿಂದ ಉತ್ತೇಜನ ಸಿಗುವಂತಾಗಲಿ.