ಶಿರಸಿ(ಉತ್ತರ ಪ್ರದೇಶ) : ಪರೇಶ್ ಮೇಸ್ತ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ನೀಡಿದೆ. ಆದರೆ ಅವರ ತಂದೆ ಪುನರ್ ತನಿಖೆಗೆ ಕೋರಿದ್ದು, ಈ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಶಿರಸಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೇಶ್ ಮೇಸ್ತ ಅವರದು ಕೊಲೆ ಹೌದೋ, ಅಲ್ಲವೋ ಎಂಬುದು ಪರಿಶೀಲನೆ ಮಾಡಬೇಕು. ಕೊಲೆ ಎಂದು ಸ್ಥಳೀಯರು ಮತ್ತು ಅವರ ತಂದೆ ಹೇಳಿದ್ದಾರೆ. ಅದರ ಕುರಿತು ವಿಚಾರ ನಡೆಸಬೇಕಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಅಂತರ್ ಜಿಲ್ಲಾ ವರ್ಗಾವಣೆ ಈಗಾಗಲೇ ರದ್ದಾಗಿದೆ . ಈ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಒತ್ತಾಯವಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ವರ್ಗಾವಣೆಗೆ ಅವಕಾಶಕ್ಕೆ ಸಂಬಂಧಿಸಿದ ವಿಷಯ ಚರ್ಚೆಯಲ್ಲಿದೆ ಎಂದು ಹೇಳಿದರು.
ಈಗಾಗಲೇ ದೇಶದ್ರೋಹಿ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ಅದರ ಜೊತೆ ಸಂಪರ್ಕ ಹೊಂದಿದ ಕೆಲವರು ಎಸ್ ಡಿ ಪಿ ಐ ಜೊತೆ ನಿಕಟವರ್ತಿಗಳಾಗುತ್ತಿರುವುದು ಸರ್ಕಾರದ ಗಮನಕ್ಕಿದೆ. ದೇಶ ದ್ರೋಹಿ ಚಟುವಟಿಕೆಗಳಲ್ಲಿ ತೊಡಗುವವರ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇಟ್ಟಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ಕಠಿಣ ಕ್ರಮ ನಿಶ್ಚಿತ ಎಂದರು.
ಇನ್ನು, ಶಿರಸಿಯಲ್ಲಿ ಟ್ರಾಫಿಕ್ ಸ್ಟೇಷನ್ ಸ್ಥಾಪನೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭಾಧ್ಯಕ್ಷರು ನಮ್ಮ ಸ್ನೇಹಿತರು. ಕಾರಣ ಶಿರಸಿಯಲ್ಲಿ ಟ್ರಾಫಿಕ್ ಠಾಣೆ ಮಾಡುವ ಒತ್ತಡವಿದೆ. ನಿಯಮಾವಳಿ ಪ್ರಕಾರ ಮಾಡಲು ಆಗಿಲ್ಲ. ಆದರೂ ಮುಂದಿನ ದಿನದಲ್ಲಿ ಈ ಕುರಿತು ಅನುಷ್ಠಾನಕ್ಕೆ ಯೋಚನೆ ಮಾಡಲಾಗುತ್ತದೆ ಎಂದು ಹೇಳಿದರು.
ಓದಿ: ಪರೇಶ್ ಮೇಸ್ತ ಪ್ರಕರಣವನ್ನು ಪುನರ್ ತನಿಖೆ ಮಾಡುವ ಅಗತ್ಯವಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ