ಕಾರವಾರ: ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21ರಂದು ನಡೆಯಲಿರುವ ಚುನಾವಣೆಗೆ ಉತ್ತರಕನ್ನಡ ಜಿಲ್ಲೆಯ 500 ಗೃಹರಕ್ಷಕ ಸಿಬ್ಬಂದಿಯನ್ನು ಚುನಾವಣಾ ಆಯೋಗವು ನಿಯೋಜಿಸಿದೆ.
ಚುನಾವಣಾ ಆಯೋಗ ಜಿಲ್ಲೆಯ 15 ಘಟಕಗಳಿಂದ ಗೃಹರಕ್ಷಕ ಸಿಬ್ಬಂದಿಯನ್ನು ಮಹಾರಾಷ್ಟ್ರ ಚುನಾವಣಾ ಕರ್ತವ್ಯಕ್ಕೆ ತೆರಳುವಂತೆ ಸೂಚಿಸಿತ್ತು. ನಗರದ ಪೊಲೀಸ್ ಪರೇಡ್ ಮೈದಾನಕ್ಕೆ ಇಂದು ಆಗಮಿಸಿದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ 9 ಬಸ್‍ಗಳಲ್ಲಿ ಸಿಬ್ಬಂದಿ ಪ್ರಯಾಣ ಬೆಳೆಸಿದರು.
ಭಾರತೀಯ ಸೇನೆ ಹಾಗೂ ಮಹಾರಾಷ್ಟ್ರ ಪೊಲೀಸರ ಜೊತೆಗೂಡಿ ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲೆಯ ಗೃಹರಕ್ಷಕರು ಶ್ರಮಿಸಲಿದ್ದು, ಅ.23ರವರೆಗೆ ಸೇವೆ ಸಲ್ಲಿಸಲಿದ್ದಾರೆ.
ಸಿಬ್ಬಂದಿಯನ್ನು ಕರೆದೊಯ್ಯಲು ಮಹಾರಾಷ್ಟ್ರ ಸರ್ಕಾರ ಕಳುಹಿಸಿದ್ದ ಬಸ್ಗಳು ಗುಜುರಿಗೆ ದುಸ್ಥಿತಿಯಲ್ಲಿದ್ದವು ಎಂಬ ಆರೋಪ ಕೇಳಿಬಂದಿದೆ. ಇದು ಸಿಬ್ಬಂದಿ ಬೇಸರಕ್ಕೆ ಕಾರಣವಾಯಿತು. ಬಸ್ಗಳಿಗೆ ಧೂಳು ಹಿಡಿದಿದ್ದವು. ಅಲ್ಲದೆ, ಸೀಟುಗಳು ಸಹ ಅಲ್ಲಲ್ಲಿ ಕಿತ್ತುಹೋಗಿದ್ದವು. ಈ ಬಸ್‍ಗಳಲ್ಲಿ ಹೇಗಪ್ಪ ಪ್ರಯಾಣಿಸುವುದು ಎನ್ನುತ್ತಲೇ ಸಿಬ್ಬಂದಿ ಬಸ್ ಏರಿದರು.