ಕಾರವಾರ: ರಾಷ್ಟ್ರೀಯ ಹೆದ್ದಾರಿ- 63ರ ಅಂಕೋಲಾ-ಹುಬ್ಬಳ್ಳಿ ಮಾರ್ಗದ ಅರಬೈಲ್‌ನಲ್ಲಿ ಗುಡ್ಡ ಕುಸಿತವಾಗಿರುವುದರಿಂದ ಮಲೆನಾಡು ಮತ್ತು ಬಯಲುಸೀಮೆಗೆ ಸಂಪರ್ಕ ಕಡಿತಗೊಂಡಿದ್ದು, ಸರಕು ಸಾಗಾಣಿಕೆಯ 500ಕ್ಕೂ ಹೆಚ್ಚು ಲಾರಿಗಳು ಅಂಕೋಲಾದ ಬಾಳೆಗುಳಿಯಲ್ಲಿ ಕಳೆದೊಂದು ವಾರದಿಂದ ಸಾಲುಗಟ್ಟಿ ನಿಂತಿವೆ.
ಭಾರಿ ಮಳೆಯಿಂದಾಗಿ ಅರೆಬೈಲ್ ಘಟ್ಟದಲ್ಲಿ ಗುಡ್ಡ ಕುಸಿದಿದೆ. ಪರಿಣಾಮ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಮಂಗಳೂರು, ಕೇರಳದಿಂದ ಸರಕನ್ನು ತುಂಬಿಕೊಂಡು ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಮತ್ತು ಹುಬ್ಬಳ್ಳಿ, ಬೆಳಗಾವಿ ಭಾಗಗಳಿಗೆ ಸಾಗುವ ಲಾರಿಗಳು ಕಳೆದ ಮೂರು ದಿನದಿಂದ ಹಟ್ಟಿಕೇರಿಯ ಐಆರ್‌ಬಿ ಟೋಲ್ಗೇಟ್ನಿಂದ ಅಂಕೋಲಾ ಅಜ್ಜಿಕಟ್ಟಾದವರೆಗೆ ಸುಮಾರು 5 ಕಿ.ಮೀ ಹೆದ್ದಾರಿಯ ಎರಡು ಬದಿಯಲ್ಲಿ ಲಂಗರು ಹಾಕಿವೆ. ಈ ಹೆದ್ದಾರಿ ತಕ್ಷಣ ಆರಂಭವಾಗದಿದ್ದರೆ ವಾಣಿಜ್ಯೋದ್ಯಮದ ಮೇಲೆ ಭಾರಿ ಪರಿಣಾಮ ಬೀರಲಿದೆ.
ಮಂಗಳೂರು ಬಂದರಿನಿಂದ ಅನಿಲ ತುಂಬಿದ ಟ್ಯಾಂಕರ್ಗಳು ಈ ಹೆದ್ದಾರಿ ಮೂಲಕವೇ ಸಾಗಬೇಕು. ಈ ಮಾರ್ಗ ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ. ಇಂತಹ ಅನಿಲ ತುಂಬಿದ ನೂರಾರು ಟ್ಯಾಂಕರ್ಗಳು ಮತ್ತು ಇತರ ವಸ್ತುಗಳ ಲಾರಿಗಳು ಇಲ್ಲಿ ಸಿಲುಕಿಕೊಂಡಿವೆ. ಮುಂದಿನ ಒಂದು ವಾರವಾದರೂ ಈ ಹೆದ್ದಾರಿ ಆರಂಭವಾಗುವುದು ಕಷ್ಟಸಾಧ್ಯ ಎಂದು ರಾ.ಹೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಇನ್ನು ಹೆದ್ದಾರಿಯಲ್ಲೇ ನಿಂತಿರುವ ಲಾರಿಗಳ ಚಾಲಕರು ಮತ್ತು ಕ್ಲೀನರ್ಗಳು ಲಾರಿಯಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದರೆ. ಇನ್ನೂ ಕೆಲವರಿಗೆ ಕೆಲ ಸಂಘ ಸಂಸ್ಥೆಗಳು ಊಟ ಪೂರೈಸುತ್ತಿವೆ. ವಾರದಿಂದ ಲಾರಿ ನಿಲ್ಲಿಸಿಕೊಂಡು ಹೆದ್ದಾರಿ ಮೇಲೆ ವಾಸ್ತವ್ಯ ಮಾಡಿರುವುದರಿಂದ ಒಂದೆರಡು ದಿನಕ್ಕೆ ಆಗುವಷ್ಟು ತಂದಿರುವ ಅಕ್ಕಿ, ಬೆಳೆ ಮತ್ತು ಕೈಯಲ್ಲಿರುವ ಹಣ ಕೂಡ ಕಾಲಿ ಆಗಿದೆ ಎಂದು ಲಾರಿ ಚಾಲಕರು ಅಸಹಾಯಕತೆ ತೋಡಿಕೊಂಡಿದ್ದಾರೆ.