ಶಿರಸಿ: ಮಳೆ-ಗಾಳಿಯ ತೀವ್ರತೆಯಿಂದ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಎರಡು ಎತ್ತುಗಳು ಬಲಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಬೊಮಡಿಕೊಪ್ಪದಲ್ಲಿ ಈ ದುರ್ಘಟನೆ ಸಂಭವಿಸಿದೆ.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸೂಕ್ತ ಸಮಯಕ್ಕೆ ತೆರವುಗೊಳಿಸದೇ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಈ ಮೃತ ಎತ್ತುಗಳು ಬೊಮಡಿಕೊಪ್ಪದ ವಾಸು ಪಟಕಾರೆ ಎಂಬ ರೈತನಿಗೆ ಸೇರಿವೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ-ಗಾಳಿಗೆ ವಿದ್ಯುತ್ ತುಂಡಾಗಿ ಬಿದ್ದಿದ್ದರೂ ಅದನ್ನು ಹೆಸ್ಕಾಂ ಸಿಬ್ಬಂದಿ ತೆರವುಗೊಳಿಸಿಲ್ಲ. ಹೀಗಾಗಿ ವಿದ್ಯುತ್ ಶಾಕ್ನಿಂದ ತನ್ನ ಎತ್ತುಗಳು ಮೃತಪಟ್ಟಿವೆ ಎಂದು ಮಾಲೀಕ ಕಣ್ಣೀರಿಟ್ಟಿದ್ದಾನೆ.
ಮಳೆಯಾಗಿದ್ದರಿಂದ ಭತ್ತದ ಗದ್ದೆ ಕೆಲಸಕ್ಕೆ ರೈತ ಎತ್ತುಗಳನ್ನು ತೆಗೆಡದುಕೊಂಡು ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಜೋಡೆತ್ತುಗಳ ಸಾವಿನಿಂದ 60 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕೃಷಿ ಕೆಲಸಕ್ಕೂ ಇದರಿಂದ ಅಡ್ಡಿಯಾಗಿದೆ. ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಎತ್ತಿನ ಮಾಲೀಕನಿಗೆ ಪರಿಹಾರ ಒದಗಿಸಿಬೇಕು ಎಂದು ರೈತರು ಆಗ್ರಹಿಸಿದ್ದಾರೆ.