ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ತಡರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿದೆ.
ಶನಿವಾರ ಮಧ್ಯಾಹ್ನದಿಂದಲೇ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರಿದಿದ್ದು, ಕಾರವಾರದಲ್ಲಿ ವ್ಯಾಪಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಕೆಲವೆಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರ ಓಡಾಟಕ್ಕೆ ಕಿರಿಕಿರಿ ಎದುರಾಗಿದೆ.
ಅರಬ್ಬೀ ಸಮುದ್ರದಲ್ಲಿ ಕಡಲಬ್ಬರ ಜೋರಾಗಿದ್ದು ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕಡಲ ಅಬ್ಬರಕ್ಕೆ ಸಮುದ್ರ ತೀರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಮೇ 16 ರವರೆಗೂ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜಿಲ್ಲಾಡಳಿತ ಕೂಡ ಕಡಲತೀರಗಳಿಗೆ ಯಾರು ತೆರಳದಂತೆ ಸೂಚಿಸಿ ಈಗಾಗಲೇ ಮುಂಜಾಗ್ರತೆ ವಹಿಸಿದೆ.