ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಯ ಆರ್ಭಟ ಸೋಮವಾರವೂ ಮುಂದುವರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡು ಅಲ್ಲಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ಜಿಲ್ಲೆಯ ಕರಾವಳಿ ಸೇರಿದಂತೆ ಮಲೆನಾಡು ಭಾಗದಲ್ಲಿ ಎರಡು ದಿನದಿಂದ ಗಾಳಿ ಸಹಿತ ಭರ್ಜರಿ ಮಳೆಯಾಗುತ್ತಿದ್ದು, ಸೋಮವಾರ ಕರಾವಳಿಯಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದೆ. ಭಟ್ಕಳ, ಹೊನ್ನಾವರ, ಅಂಕೋಲಾ ಮತ್ತು ಕಾರವಾರದಲ್ಲಿ ಭರ್ಜರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಅಲ್ಲದೆ ಇದೆ ರೀತಿ ಮಳೆ ಮುಂದುವರಿದಲ್ಲಿ ನೆರೆಹಾವಳಿ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ದಾರಿಗೆ ಬಿದ್ದ ವಿದ್ಯುತ್ ಲೈನ್ ತಪ್ಪಿದ ಭಾರಿ ಅನಾಹುತ
ನಗರದ ಮೇಸ್ತಾ ರಸ್ತೆಯಲ್ಲಿ ವಿದ್ಯುತ್ ಇದ್ದಾಗಲೇ ಲೈನ್ ಮೇಲೆ ಮರವೊಂದು ಉರುಳಿದ್ದು, ವಿದ್ಯುತ್ ಕಂಬ ಸಹಿತ ಲೈನ್ ನಡು ರಸ್ತೆಯಲ್ಲಿ ಬಿದ್ದಿದೆ. ಅದೃಷ್ಟವಶಾತ್ ಬೀದಿಯಲ್ಲಿ ಜನರು ಇಲ್ಲದೇ ಇದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಇನ್ನು ವಿದ್ಯುತ್ ತಂತಿಯನ್ನು ಹೆಸ್ಕಾಂ ಅಧಿಕಾರಿಗಳು ತೆರವುಗೊಳಿಸುವ ಕೆಲಸ ಆರಂಭಿಸಿದ್ದಾರೆ.
ಹೆದ್ದಾರಿಗೆ ಬಿದ್ದ ಆಲದ ಮರ
ಗಾಳಿ ಸಹಿತ ಭಾರಿ ಮಳೆಗೆ ಹೊನ್ನಾವರದ ಕರ್ಕಿ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಗಾತ್ರದ ಆಲದ ಮರವೊಂದು ಉರುಳಿಬಿದ್ದು ಕೆಲ ಗಂಟೆಗಳವರೆಗೆ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಮರ ತೆರವು ಕಾರ್ಯ ಮಾಡುತ್ತಿದ್ದು, ಎರಡು ಬದಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿಸಲಾಗಿದೆ.
ಇದಲ್ಲದೆ ಭಟ್ಕಳ ಹಾಗೂ ಅಂಕೋಲಾ ಭಾಗದ ಕೆಲ ತಗ್ಗು ಪ್ರದೇಶಗಳಿಗೆ ಇಂದು ಕೂಡ ನೀರು ನುಗ್ಗಿದ್ದು, ಮಳೆ ಮುಂದುವರಿದಲ್ಲಿ ನೆರೆಹಾವಳಿ ಸೃಷ್ಟಿಯಾಗುವ ಆತಂಕ ಎದುರಾಗಿದೆ.