ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ತಿಂಗಳ ಹಿಂದೆ ಪ್ರವಾಹ ಸೃಷ್ಟಿಸಿ ತಣ್ಣಗಾಗಿದ್ದ ಮಳೆ ಮತ್ತೆ ಆರ್ಭಟಿಸುತ್ತಿದೆ. ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯಲಾರಂಭಿಸಿದ್ದು, ಕರಾವಳಿ ಭಾಗದ ನದಿಯಂಚಿನ ಜನರು ಮತ್ತೆ ಆತಂಕಕ್ಕೀಡಾಗಿದ್ದಾರೆ
ಹೌದು, ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮತ್ತೆ ಎಡಬಿಡದೆ ಮಳೆ ಸುರಿಯುತ್ತಿದೆ. ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರೆ, ರಸ್ತೆಗಳು ಜಲಾವೃತವಾಗಿವೆ. ಹೀಗಾಗಿ ಜನರು ಪರದಾಡುತ್ತಿದ್ದಾರೆ. ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ ಕರಾವಳಿ ಭಾಗದ ಕಾಳಿ, ಗಂಗಾವಳಿ, ಅಘನಾಶಿನಿ ನದಿ ಉಕ್ಕಿ ಹರಿದು ಸಾಕಷ್ಟು ಅನಾಹುತ ಸೃಷ್ಟಿಯಾಗಿತ್ತು. ಬಳಿಕ ಮಳೆ ಕಡಿಮೆಯಾಗಿದ್ದರಿಂದ ಜನ ಜೀವನ ಯಥಾಸ್ಥಿತಿಗೆ ತಲುಪಿತ್ತು. ಆದರೆ ಇದೀಗ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳು ಸೇರಿದಂತೆ ಕರಾವಳಿಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಶರಾವತಿ ನದಿಗೆ ನಿರ್ಮಿಸಿದ್ದ ಲಿಂಗನಮಕ್ಕಿ ಅಣೆಕಟ್ಟಿನಿಂದ ಹಾಗೂ ಕದ್ರಾ ಅಣೆಕಟ್ಟಿನಿಂದ ನೀರನ್ನು ಹೊರ ಬಿಡಲಾಗಿದೆ. ಈಗಷ್ಟೇ ಪ್ರವಾಹದಿಂದ ನಿಟ್ಟುಸಿರು ಬಿಟ್ಟಿದ್ದ ಜನರು ಇದೀಗ ಮತ್ತೊಮ್ಮೆ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.
ಸಮುದ್ರದಲ್ಲಿ ಅಲೆಗಳ ಅಬ್ಬರ, ಮೀನುಗಾರರಿಗೆ ಎಚ್ಚರಿಕೆ:
ಗಾಳಿ-ಮಳೆಯಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಮೀನುಗಾರರಿಗೆ ಆಳಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಇದರಿಂದ ಕಳೆದ ಒಂದು ವಾರದಿಂದ ಮೀನುಗಾರಿಕೆಗೆ ತೆರಳಲಾಗದೇ ಬೋಟ್ ಗಳು ಬಂದರಿನಲ್ಲಿ ಲಂಗರು ಹಾಕಿವೆ. ಇನ್ನು ಗೋವಾ, ತಮಿಳುನಾಡಿನ ನೂರಾರು ಬೋಟ್ ಗಳು ಕೂಡ ಮೀನುಗಾರಿಕೆ ನಡೆಸಲಾಗದೆ ಹತ್ತಿರದ ಬೈತಖೋಲ್ ಬಂದರು ಬಳಿ ನಿಂತಿವೆ.