ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಬೆನ್ನಲ್ಲೇ ಮಳೆಯ ಆರ್ಭಟ ಮುಂದುವರೆದಿದೆ. ಜೊಯಿಡಾದ ಅಣಶಿ ಘಟ್ಟದಲ್ಲಿ ರಾಜ್ಯ ಹೆದ್ದಾರಿ ಮೇಲೆ ಗುಡ್ಡ ಕುಸಿದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮೂರನೇ ಬಾರಿಗೆ ಕಾರವಾರದಿಂದ ಬೆಳಗಾವಿ ಸಂಪರ್ಕಿಸುವ ಅಣಶಿ ಘಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ಘಟ್ಟ ಪ್ರದೇಶದ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು, ಒಂದು ಕಡೆ ಮಾತ್ರ ಗುಡ್ಡ ಕುಸಿದು ಹೆದ್ದಾರಿ ಸಂಚಾರ ಬಂದಾಗಿದೆ.
ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಮಾರ್ಗವಾಗಿ ಸಂಚಾರ ಮಾಡುವವರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಇನ್ನು ಅಣಶಿ ಘಟ್ಟದಲ್ಲಿ ಈ ಹಿಂದೆಯೇ ಭೂ ಕುಸಿತವಾಗುವ ಬಗ್ಗೆ ಕೇಂದ್ರ ಭೂವಿಜ್ಞಾನಿಗಳ ತಂಡ ಮುನ್ಸೂಚನೆ ನೀಡಿತ್ತು. ಅದರಂತೆ ಮಳೆ ಹೆಚ್ಚಳವಾದ ಬೆನ್ನಲ್ಲೇ ಭೂಕುಸಿತಗಳು ಪುನರಾವರ್ತನೆ ಆಗುತ್ತಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಂಟ್ವಾಳ : ನಿರಂತರ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿ ಎಂಬಲ್ಲಿ ಭೂ ಕುಸಿತ ಉಂಟಾಗಿದೆ. ಇದು ಇನ್ನಷ್ಟು ಮುಂದುವರಿದರೆ, ಸುಮಾರು ನೂರರಷ್ಟು ಮನೆಗಳು ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ. ಜೊತೆಗೆ ಇಲ್ಲಿನ ಟಿಪ್ಪು ರಸ್ತೆ ಸಂಪೂರ್ಣ ಹಾನಿಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭೂ ಕುಸಿತದಿಂದ ಇಲ್ಲಿನ 75ಕ್ಕೂ ಅಧಿಕ ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು ಭೂ ಕುಸಿತ ಉಂಟಾದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರು ಪೂರೈಸುವ ಪೈಪ್ ಗೆ ಹಾನಿಯಾಗಲಿದ್ದು 27 ವಾರ್ಡ್ ಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಗುಡ್ಡ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯ ಪುರಸಭಾ ಸದಸ್ಯೆ ಝೀನತ್ ಫಿರೋಜ್ ಮತ್ತು ಸಂಶದ್ ಅವರ ನಿಯೋಗದಿಂದ ಜಿಲ್ಲಾಧಿಕಾರಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ,ಶೀಘ್ರದಲ್ಲೇ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಪುರಸಭಾ ಸದಸ್ಯೆ ಝೀನತ್ ಫಿರೋಜ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿತ, ಸಂಚಾರ ವ್ಯತ್ಯಯ : ಬಂಟ್ವಾಳ ತಾಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ಇಲ್ಲಿನ ಸೂರಿಕುಮೇರು ಎಂಬಲ್ಲಿ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಬದಿ ಅಗೆದಿದ್ದ ಗುಡ್ಡ ಕುಸಿತಗೊಂಡು ಮಣ್ಣು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿತ್ತು. ಬಳಿಕ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಪಾಣೆಮಂಗಳೂರಿನಲ್ಲಿ ಹೆದ್ದಾರಿ ಪಕ್ಕದಲ್ಲಿ ಎತ್ತರದ ಗುಡ್ಡದಲ್ಲಿರುವ ಪುರಸಭೆಗೆ ಸೇರಿದ ಸಮಗ್ರ ಕುಡಿವ ನೀರು ಸರಬರಾಜಿನ ಬೃಹತ್ ಟ್ಯಾಂಕ್ ಕುಸಿಯುವ ಭೀತಿ ಎದುರಿಸುತ್ತಿದೆ. ಟ್ಯಾಂಕ್ ಅಡಿ ಭಾಗದಲ್ಲಿ ಮಣ್ಣನ್ನು ಅಗೆಯಲಾಗಿದ್ದು,ಒಂದು ವೇಳೆ ಟ್ಯಾಂಕ್ ಕುಸಿದರೆ ಈ ಭಾಗದ ಜನರಿಗೆ ಕುಡಿಯುವ ನೀರಿನ ಪೂರೈಕೆ ಕಡಿತಗೊಳ್ಳಲಿದೆ. ಸದ್ಯ ಟ್ಯಾಂಕಿನ ನೀರನ್ನು ಖಾಲಿ ಮಾಡಿ ಕುಸಿಯದಂತೆ ಎಚ್ಚರಿಕೆ ವಹಿಸಲಾಗಿದೆ.
ಓದಿ :ಚಿಕ್ಕಮಗಳೂರು: ಮಹಾಮಳೆಯ ಆರ್ಭಟಕ್ಕೆ ತತ್ತರಿಸಿದ ಮಲೆನಾಡು..ಆತಂಕದಲ್ಲಿ ಜನಜೀವನ