ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಎಡಬಿಡದೆ ಸುರಿದ ಧಾರಕಾರ ಮಳೆಯಿಂದಾಗಿ ಕಾರವಾರ, ಹೊನ್ನಾವರ, ಅಂಕೋಲಾ ಭಾಗದ ಕೆಲ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸಾಕಷ್ಟು ಹಾನಿ ಸಂಭವಿಸಿದೆ.
ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಆರಂಭಗೊಂಡಿದ್ದ ಮಳೆಗೆ ಹೊನ್ನಾವರ ತಾಲೂಕಿನ ಮಂಕಿ ಬಣಸಾಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ದೇವರಗದ್ದೆ, ಮಡಿ, ಕೆಳಗನೂರು ಬಳಿ ಹಳ್ಳಕೊಳ್ಳಗಳು ಉಕ್ಕಿ ಹರಿದ ಕಾರಣ ತಗ್ಗು ಪ್ರದೇಶಗಳು ಜಲಾವೃತಗೊಂಡು, ರಸ್ತೆ ತುಂಬ ನೀರು ಹರಿದಿದೆ. ಅಲ್ಲದೆ ಗದ್ದೆ, ತೋಟಗಳಿಗೆ ರಸ್ತೆಯಂಚಿನ ಮಣ್ಣು ಬಂದು ಸೇರಿದ್ದರಿಂದ ಸಾಕಷ್ಟು ಹಾನಿ ಸಂಭವಿಸಿದೆ. ಅಲ್ಲದೆ ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.
ಇನ್ನು ಭಟ್ಕಳದಲ್ಲಿಯೂ ಕೂಡ ಶಾಲೆಯೊಂದಕ್ಕೆ ನೀರು ನುಗ್ಗಿದ ಪರಿಣಾಮ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಅಂಕೋಲಾ ಬಿಳಿಹೊಯ್ಗಿ ಗ್ರಾಮದ ದೇವು ಹರಿಕಾಂತ ಎಂಬುವವರ ಮನೆ ಮಳೆಗೆ ನೆನೆದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಕಾರವಾರದಲ್ಲಿ ಕೂಡ ಎಡಬಿಡದೆ ಸುರಿದ ಮಳೆಯಿಂದಾಗಿ ಪದ್ಮನಾಭನಗರ ಸೇರಿದಂತೆ ಕೆಲವೆಡೆ ನೀರು ತುಂಬಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಡದೆ ಸುರಿದ ಮಳೆ ಸಂಜೆ ಸ್ವಲ್ಪ ಬಿಡುವು ನೀಡಿದ್ದು, ಇದರಿಂದ ಜಲಾವೃತಗೊಂಡಿದ್ದ ತಗ್ಗು ಪ್ರದೇಶಗಳಲ್ಲಿ ನೀರು ಇಳಿಯತೊಡಗಿದೆ. ಇನ್ನು ಹೊನ್ನಾವರ ಭಾಗದಲ್ಲಿ ನೆರೆ ಪ್ರದೇಶಗಳಿಗೆ ಶಾಸಕ ಸುನೀಲ್ ನಾಯ್ಕ, ತಹಸೀಲ್ದಾರ ವಿವೇಕ ಶೆಣ್ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.