ಕಾರವಾರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ದಿನಗಳಿಂದ ಮುಳುಗಡೆಯಾಗಿದ್ದ ಕರಾವಳಿ ಇಂದೂ ಕೂಡ ಜಲಾವೃತಗೊಂಡಿದ್ದು, ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಗೆ ಅಕ್ಷರಶಃ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕಾಳಿ, ಅಘನಾಶಿನಿ, ಶರಾವತಿ, ಗಂಗಾವಳಿ ನದಿಗಳು ಉಕ್ಕಿ ಹರಿಯುತ್ತಿವೆ. ಇದಲ್ಲದೇ ಕರಾವಳಿಯಲ್ಲಿಯೂ ಮಳೆ ಮುಂದುವರಿದಿದ್ದು, ಕದ್ರಾ ಜಲಾಶಯದಿಂದ ನಿರಂತರವಾಗಿ ನೀರನ್ನು ಹೊರ ಬಿಡಲಾಗುತ್ತಿದೆ.
ಇದರಿಂದ ಕಾಳಿ ನದಿಯಂಚಿನ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳ ನೂರಾರು ಮನೆಗಳು ಸತತ ಮೂರು ದಿನಗಳಿಂದ ಮುಳುಗಡೆಯಾಗಿವೆ. ಅಂಕೋಲಾದಲ್ಲಿ ಗಂಗಾವಳಿ, ಕುಮಟಾದಲ್ಲಿ ಅಘನಾಶಿ ನದಿ ಇಂದು ಕೂಡ ತುಂಬಿ ಹರಿಯುತ್ತಿದ್ದು, ಈ ಭಾಗದ ಸಾವಿರಾರು ಮನೆಗಳು ಮುಳುಗಡೆಯಾಗಿವೆ. ಜಿಲ್ಲಾಡಳಿತ, ತಾಲೂಕು ಆಡಳಿತ ನಿರಾಶ್ರಿತರು ಮತ್ತು ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸಿದೆ. ಪೊಲೀಸರು, ಕರಾವಳಿ ಕಾವಲು ಪಡೆ ನೌಕಾನೆಲೆ ಸಿಬ್ಬಂದಿ ನೆರೆ ಸಂತೃಪ್ತ ರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಸತತ ಮೂರು ದಿನದಿಂದ ಶ್ರಮಿಸುತ್ತಿವೆ.
ಕದ್ರಾ ಜಲಾಶಯದಿಂದ ಮತ್ತೆ ೧.೫ ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟ ಕಾರಣ ಕದ್ರಾ, ಮಲ್ಲಾಪುರ, ಕೈಗಾವಾಡದಲ್ಲಿ ಜಲ ದಿಗ್ಬಂದನಕ್ಕೊಳಗಾಗಿದ್ದ ಸುಮಾರು 300 ಕ್ಕೂ ಹೆಚ್ಚು ಜನರನ್ನು ನೌಕಾನೆಲೆ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಮಹಾಮಳೆಗೆ ಜಿಲ್ಲಾದ್ಯಂತ ತೆರೆದಿರುವ ಸುಮಾರು 50 ಗಂಜಿ ಕೇಂದ್ರಗಳಲ್ಲಿ 1,700 ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ದಾಖಲೆಯ ಮಳೆಯಾದ ಕಾರಣ ಕೃಷಿ ಹಾಗೂ ಜಮೀನುಗಳು ಜಲಾವೃತಗೊಂಡಿದ್ದು, ಹಾನಿ ಸಂಭವಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾ ಮಳೆ ಕರಾವಳಿ ಭಾಗದ ಜನ ಜೀವನವನ್ನು ನರಕವಾಗಿಸಿದೆ.