ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಏಕಾಏಕಿ ಆರ್ಭಟಿಸಿದ ಮಳೆಯಿಂದಾಗಿ ದೊಡ್ಡ ಅನಾಹುತ ಸೃಷ್ಟಿಯಾಗಿದೆ. ಭಾರಿ ಮಳೆಗೆ ಭಟ್ಕಳದ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದ್ದು, ಮನೆ ಮೇಲೆ ಗುಡ್ಡ ಕುಸಿದು ಮನೆಯಲ್ಲಿದ್ದ ತಾಯಿ ಮಕ್ಕಳು ಸೇರಿ ನಾಲ್ವರು ನಾಪತ್ತೆಯಾಗಿದ್ದಾರೆ.
ಸೋಮವಾರ ಸಂಜೆಯಿಂದ ಸುರಿಯುತ್ತಿದ್ದ ಮಳೆ ಮಂಗಳವಾರ ಬೆಳಗ್ಗೆವರೆಗೂ ಮುಂದುವರಿದ ಪರಿಣಾಮ ಭಟ್ಕಳ ಪಟ್ಟಣ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮಣ್ಣಕುಳ್ಳಿ, ಚೌಥನಿ ಮೂಡಳ್ಳಿ, ಮೂಡಭಡ್ಕಳ, ಮುಟ್ಟಳ್ಳಿ, ಮುಂಡೊಳ್ಳಿ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು ಇನ್ನು ಹಲವು ಪ್ರದೇಶಗಳಿಗೆ ನೀರು ನುಗ್ಗತೊಡಗಿದೆ.
ಮನೆ ಮೇಲೆ ಗುಡ್ಡ ಕುಸಿತ, ನಾಲ್ವರು ನಾಪತ್ತೆ? ಇನ್ನೂ ಭಾರಿ ಮಳೆಗೆ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಮನೆಯಲ್ಲಿ ಮಲಗಿದ್ದ ನಾಲ್ಕು ಮಂದಿ ಸಿಲುಕಿಕೊಂಡಿದ್ದಾರೆ. ಮನೆ ಸಂಪೂರ್ಣ ಕುಸಿತವಾಗಿದ್ದು, ಮನೆಯ ಅಡಿ ಯಜಮಾನಿ ಲಕ್ಷ್ಮಿ ನಾರಾಯಣ ನಾಯ್ಕ (60), ಮಗಳು ಲಕ್ಷ್ಮಿ ನಾಯ್ಕ (45), ಮಗ ಅನಂತ ನಾರಾಯಣ ನಾಯ್ಕ (38), ಹಾಡುವಳ್ಲಿ ಬಡಬಾಗಿಲಿನ ತಂಗಿ ಮಗ ಪ್ರವೀಣ್ ರಾಮಕೃಷ್ಣ ನಾಯ್ಕ (16) ಮನೆಯಲ್ಲಿ ಸಿಲುಕಿಕೊಂಡಿದ್ದಾರೆ. ಈಗಾಗಲೇ ಸ್ಥಳದಲ್ಲಿ ಸ್ಥಳೀಯರು ಸೇರಿದಂತೆ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಸ್ಥಳಕ್ಕೆ ಜೆಸಿಬಿ ಹೋಗಲು ಜಾಗ ಇಲ್ಲದ ಕಾರಣ ಜನರೇ ಕಾರ್ಯಾಚರಣೆಗೆ ಇಳಿದಿದ್ದು, ಜೆಸಿಬಿ ಕೂಡ ಕಾರ್ಯಾಚರಣೆಗೆ ಬಳಸಲು ಅಧಿಕಾರಿಗಳು ಪ್ರಯತ್ನ ನಡೆಸಲಾಗುತ್ತಿದೆ.
ಇನ್ನು ಭಟ್ಕಳ ಪಟ್ಟಣ ಸಂಪೂರ್ಣ ಮುಳುಗಡೆಯಾಗಿ ರಸ್ತೆಗಳಲ್ಲಿ ನೀರು ನದಿಯಂತೆ ಹರಿದು ಹೋಗುತ್ತಿದೆ. ಎದೆಮಟ್ಟದ ನೀರು ತುಂಬಿಕೊಂಡಿದ್ದು ನೂರಾರು ಮನೆಗಳು, ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ. ಇನ್ನು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಜಲಾವೃತಗೊಂಡ ಕಾರಣ ವಾಹನ ಸಂಚಾರ ಅಸಾಧ್ಯವಾಗಿರುವ ಕಾರಣ ಭಟ್ಕಳ ಕಡೆ ಪ್ರಯಾಣ ಬೆಳೆಸದಂತೆ ಜಿಲ್ಲಾಧಿಕಾರಿ ಮುಲ್ಲೇ ಮುಹಿಲನ್ ಸೂಚಿಸಿದ್ದಾರೆ.
ದಶಕದ ದೊಡ್ಡ ಮಳೆ: ಇನ್ನು ದಶಕಗಳ ಬಳಿಕ ಭಟ್ಕಳದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಇಲ್ಲಿನ ಹಿರಿಯರು ಹೇಳುತ್ತಿದ್ದಾರೆ. ಭಾರಿ ಮಳೆಗೆ ಇಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸದ್ಯ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಕುಮಟಾದಿಂದ ಎಸ್ಡಿಆರ್ಎಫ್ ತಂಡ ತೆರಳಿ ಕಾರ್ಯಾಚರಣೆ ನಡೆಸುತ್ತಿದೆ. ಇನ್ನು ಶಾಸಕ ಸುನಿಲ್ ನಾಯ್ಕ ಕೂಡ ಜಾಲವೃತಗೊಂಡ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಭಟ್ಕಳ ತಾಲೂಕಿನಲ್ಲಿ ವ್ಯಾಪಕವಾಗಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಭಾರೀ ಮಳೆಯಾಗುವ ಮುನ್ಸೂಚನೆ ಗಮನದಲ್ಲಿರಿಸಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಂಗಳವಾರ ಭಟ್ಕಳ ತಾಲೂಕಿನ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ.
ಇನ್ನು ಉತ್ತರಕನ್ನಡ ಜಿಲ್ಲೆಯಾದ್ಯಂತ ಆ.2 ರಿಂದ ಆ.6 ರವರೆಗೆ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಲಿದ್ದು, ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈ ಅವಧಿಯಲ್ಲಿ ಜನರು ಎಚ್ಚರಿಕೆ ವಹಿಸುವಂತೆ ಮತ್ತು ನದಿ ಹಾಗೂ ಕಡಲತೀರದ ಬಳಿ ತೆರಳದಂತೆ ಸೂಚಿಸಿದೆ. ಇನ್ನು ಯಾಂತ್ರೀಕೃತ ಮೀನುಗಾರಿಕಾ ನಿಷೇಧವು ಮುಕ್ತಾಯವಾದ ಬೆನ್ನಲ್ಲೇ ಮಳೆ ಜೋರಾಗಿದ್ದು, ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಆದರೆ ಸೋಮವಾರದಿಂದ ಮೀನುಗಾರಿಕೆ ಆರಂಭವಾಗಿ ಹಲವು ದೋಣಿಗಳು ಆಳಸಮುದ್ರಕ್ಕೆ ಹೋಗಿದ್ದವು. ಮೀನುಗಾರರು ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗುವ ನಿರೀಕ್ಷೆಯಲ್ಲಿರುವಾಗಲೇ ಭಾರಿ ಮಳೆ ಮತ್ತೆ ಆರಂಭವಾಗಿದ್ದು, ಮೀನುಗಾರರಿಗೆ ವಾಪಸ್ಸ್ ದಡಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.
ಓದಿ :ಸುಳ್ಯ, ಕಡಬ ತಾಲೂಕಿನಲ್ಲಿ ಮೇಘಸ್ಫೋಟ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ