ಭಟ್ಕಳ: ತಾಲೂಕಿನಾದ್ಯಂತ ರಾತ್ರಿ ಪೂರ್ತಿ ಸುರಿದ ಭಾರಿ ಗಾಳಿ, ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು. ಇಲ್ಲಿನ ಪ್ರವಾಸಿ ತಾಣವಾದ ಮುರುಡೇಶ್ವರದ ಕಡಲ ತೀರದಲ್ಲಿ ಅಲೆಗಳ ಏರಿಳಿತ ಜೋರಾಗಿದ್ದು, ದಡದಲ್ಲಿನ ದೋಣಿ ಹಾಗೂ ಗೂಡಂಗಡಿಗಳು ಅಲೆಗಳ ಹೊಡೆತಕ್ಕೆ ತೇಲಿ ಹೋಗಿವೆ.
ಒಂದು ವಾರದಿಂದ ಭಟ್ಕಳ ತಾಲೂಕಿನಾದ್ಯಂತ ಹವಮಾನ ವೈಪರಿತ್ಯ ಉಂಟಾಗಿದ್ದು, ಬೆಳಗ್ಗೆ ಸಮಯದಲ್ಲಿ ಚಳಿ ಆವರಿಸಿಕೊಂಡು, ಮಧ್ಯಾಹ್ನವಾಗುತ್ತಿದಂತೆ ಉರಿ ಬಿಸಿಲು ಕಾಣಿಸಿಕೊಳ್ಳುತ್ತದೆ. ಸಂಜೆ ಆಗುತ್ತಿದಂತೆ ಮತ್ತೆ ಮಳೆ, ಗುಡುಗು ಆರಂಭವಾಗುತ್ತಿದೆ.
ಮರ ಬಿದ್ದು ಮನೆಗೆ ಜಖಂ: ಮುರುಡೇಶ್ವರದ ಕಾಯ್ಕಿಣಿ ಪಂಚಾಯಿತ ವ್ಯಾಪ್ತಿಯ ಬೆದರು ಮನೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಗೋಳಿಮರ ಕುಸಿದು ಎರಡು ಮನೆಗಳು ಸಂಪೂರ್ಣ ಜಖಂ ಆಗಿವೆ.
ಮಾದೇವಿ ನಾಯ್ಕ, ಮಂಜಮ್ಮ ಎಂ ನಾಯ್ಕ ಎನ್ನುವವರ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ. ಗ್ಯಾಸ್ ಸೋರಿಕೆ ಆತಂಕದ ಹಿನ್ನಲೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.