ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ದಿನವಿಡೀ ಎಡಬಿಡದೆ ಸುರಿದ ಮಳೆಯಿಂದಾಗಿ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯ ಕಾರವಾರ ಸೇರಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರ ಓಡಾಟಕ್ಕೆ ಕಿರಿಕಿರಿ ಎದುರಾಗಿದೆ.
ಅರಬ್ಬೀ ಸಮುದ್ರದಲ್ಲಿ ಕಡಲ ಅಬ್ಬರ ಜೋರಾಗಿದೆ. ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕಡಲ ಅಬ್ಬರಕ್ಕೆ ಸಮುದ್ರ ತೀರದಲ್ಲಿ ವಾಸಿಸೋ ಜನರಲ್ಲಿ ಆತಂಕ ಮನೆ ಮಾಡಿದೆ. ಭಾರೀ ಮಳೆಯಿಂದಾಗಿ ತಾಲೂಕಿನ ಕಡವಾಡ ಗ್ರಾಮದ ಹಿನ್ನೀರಿನ ಪ್ರದೇಶದಲ್ಲಿ ಹಳ್ಳವೊಂದಕ್ಕೆ ಮಣ್ಣು ಸುರಿದು ಅವೈಜ್ಞಾನಿಕ ಕಾಮಗಾರಿ ನಡೆಸಿದ ಕಾರಣ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು.
ತಕ್ಷಣ ಸ್ಥಳೀಯರು ಹಳ್ಳಕ್ಕೆ ತುಂಬಿದ ನೀರನ್ನು ತೆರವುಗೊಳಿಸಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಇನ್ನು, ಜಿಲ್ಲೆಯಲ್ಲಿ ಇನ್ನೂ ಎರಡು ಮೂರುದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಓದಿ: ಬ್ರಾಹ್ಮಣ್ಯ ಅವಹೇಳನ ಪ್ರಕರಣ; ಪೊಲೀಸರಿಂದ ನಟ ಚೇತನ್ 4 ತಾಸು ವಿಚಾರಣೆ