ಕಾರವಾರ: ಜಿಲ್ಲೆಯ ಕರಾವಳಿಯ ಅಂಕೋಲಾ, ಕುಮಟಾ, ಹೊನ್ನಾವರ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಸ್ವಲ್ಪ ಜೋರಾಗಿದೆ. ಆದರೆ ಈಗಾಗಲೇ ಕರಾವಳಿಯಲ್ಲಿ ಘೋಷಿಸಿದ್ದ ರೆಡ್ ಅಲರ್ಟ್ ಇಂದು ಮುಕ್ತಾಯವಾಗಲಿದೆ.
ಇನ್ನು ಮಲೆನಾಡು ಭಾಗದಲ್ಲಿಯೂ ಮಳೆ ಮುಂದುವರೆದಿದ್ದು, ಶಿರಸಿ, ಸಿದ್ದಾಪುರ, ಯಾಲ್ಲಾಪುರ ಭಾಗಗಳಲ್ಲಿ ನಿನ್ನೆಯಿಂದ ಎಡಬಿಡದೆ ಸುರಿಯತೊಡಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿಯಲ್ಲಿ ಹರಿವು ಹೆಚ್ಚಾಗಿದೆ.
ಇನ್ನು ಕಳೆದ ಎರಡು ದಿನಗಳಿಂದ ಬೀಸುತ್ತಿದ್ದ ಗಾಳಿ ಅಬ್ಬರ ಕೂಡ ಮುಂದುವರೆದಿದೆ. ಪರಿಣಾಮ ಕಾರವಾರದ ಕಡಲ ತೀರದಲ್ಲಿ ಲಂಗರು ಹಾಕಿದ್ದ ಹೊರ ಜಿಲ್ಲೆ ಹಾಗೂ ರಾಜ್ಯದ ಬೋಟ್ಗಳು ಇಂದು ಕೂಡ ಇಲ್ಲಿಯೇ ಬೀಡು ಬಿಟ್ಟಿವೆ. ಹವಮಾನ ಇಲಾಖೆ ಇನ್ನು ಎರಡು ದಿನ ಮಳೆ ಮುಂದುವರೆಯುವ ಬಗ್ಗೆ ಮುನ್ಸೂಚನೆ ನೀಡಿದ್ದು, ಮತ್ತೆಲ್ಲಿ ನೆರೆಹಾವಳಿ ಸೃಷ್ಟಿಯಾಗುವುದೋ ಎಂಬ ಆತಂಕ ಶುರುವಾಗಿದೆ.