ಶಿರಸಿ : ಕೋವಿಡ್-19 ಸಮಸ್ಯೆಯಿಂದಾಗಿ ಪುನಃ ಲಾಕ್ ಡೌನ್ ಆಗುವ ಸ್ಥಿತಿ ಇನ್ನೂ ರಾಜ್ಯದಲ್ಲಿ ಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಜವಾಬ್ದಾರಿಯುತವಾಗಿ ಈ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು. ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು ಹಾಗೂ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಮೂರನೇ ಹಂತದ ಲಸಿಕೆ ನೀಡಲು ಚಾಲನೆ ನೀಡಲಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ ಬೇರೆ ಆರೋಗ್ಯ ಸಮಸ್ಯೆ ಉಳ್ಳವರಿಗೆ ಲಸಿಕೆ ನೀಡಲಾಗುತ್ತದೆ. 270 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 50 ಲಕ್ಷ ಹಿರಿಯ ನಾಗರಿಕರಿದ್ದಾರೆ. 16 ಲಕ್ಷ ಜನರು ಇತರ ರೋಗದ ಸಮಸ್ಯೆ ಇರುವವರು ಇದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಳಿಚಿ ಬಿತ್ತು ಶಿಬಾರದ ತ್ರಿಶೂಲ.. ಮೈಲಾರ ಕಾರ್ಣಿಕೋತ್ಸವಕ್ಕೂ ಮುನ್ನ ಅಪಶಕುನವಾಯ್ತೇ?
ಇಂದು ಪ್ರಧಾನಿ ಏಮ್ಸ್ ಸಂಸ್ಥೆಗೆ ಭೇಟಿ ನೀಡಿ ಅವರೇ ಖುದ್ದಾಗಿ ಲಸಿಕೆ ತೆಗೆದುಕೊಂಡಿದ್ದಾರೆ. ಅವರು ದೇಶದ ಜನರಿಗೆ ಪ್ರೇರಣೆಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಕೂಡಾ ಎರಡು ಹಂತದ ಲಸಿಕೆ ವಿತರಣೆಗೆ ಚಾಲನೆ ನೀಡಿದ್ದಾರೆ. ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ, ಜನರು ಆನ್‌ಲೈನ್ ಮೂಲಕ ದಾಖಲು ಮಾಡಿಕೊಳ್ಳಬಹುದು. ಅನಕ್ಷರಸ್ಥರು ನೇರವಾಗಿ ಪ್ರಾಥಮಿಕ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದು ಮಾಹಿತಿ ನೀಡಿದರು.