ಕಾರವಾರ: ಕುಕ್ಕುತ್ತೆ, ಕೂದಲು ಜಗ್ಗುತ್ತೆ. ಅದರೊಂದಿಗೆ ಇವರು ಆಡೋದೇ ಒಂದು ಮೋಜು ಅನಿಸಿದೆ. ಅಬ್ಬಬ್ಬಾ ಅದರ ಕೊಕ್ಕು ನೋಡಿ ಎಷ್ಟು ಉದ್ದಕ್ಕಿದೆ. ಆದರೂ ಇವರಿಗೆ ಭಯವಿಲ್ಲ. ಅದನ್ನು ಹಿಡಿದು ಮುದ್ದಾಡ್ತಾರೆ. ಇದು ಅಪರೂಪದಲ್ಲಿ ಅಪರೂಪದ ಪಕ್ಷಿ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಿಕೇರಿ ಗ್ರಾಮದ ಕೃಷ್ಣಾನಂದ ಶೆಟ್ಟಿ ಎಂಬುವರ ಮನೆಗೆ ನಿತ್ಯ ಈ ಅತಿಥಿ ಆಗಮಿಸುತ್ತದೆ. "ಹಾರ್ನ್ ಬಿಲ್" ಎಂದು ಕರೆಯಲಾಗುವ ಈ ಹಕ್ಕಿ ಎಲ್ಲರ ಗಮನಸೆಳೆಯುತ್ತಿದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಮೂರು ಹೊತ್ತು ಮನೆ ಬಾಗಿಲಿಗೆ ಹಾರಿ ಬರುವ ಹಕ್ಕಿ ಮನೆಯವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದೆ.
ಸುತ್ತಮುತ್ತ ಹತ್ತಾರು ಮನೆಗಳಿವೆ. ಆದರೆ, ಇದು ಕೃಷ್ಣಾನಂದ ಅವರ ಮನೆಗೆ ಮಾತ್ರ ಬರುತ್ತೆ. ಮನೆಯವರಿಗೂ ಈ ಹಕ್ಕಿ ಕಂಡ್ರೆ ಪಂಚಪ್ರಾಣ. ಅದು ನಿತ್ಯ ಬರುವುದನ್ನೇ ಎದುರು ನೋಡುವ ಮನೆಯವರು ಚಪಾತಿ, ದೋಸೆ ಹಾಗೂ ಬಾಳೆಹಣ್ಣು.. ಹೀಗೆ ಏನೇ ಕೊಟ್ಟರೂ ಖುಷಿಯಿಂದಲೇ ತಿನ್ನುತ್ತೆ. ಅದರಲ್ಲಿಯೂ ಜಿಲೇಬಿ ಅಂದ್ರೆ ತುಂಬಾ ಇಷ್ಟವಂತೆ. ಮನೆಯ ಒಳಭಾಗದವರೆಗೂ ತೆರಳುವ ಹಕ್ಕಿ ಮಕ್ಕಳೊಂದಿಗೂ ಆಟವಾಡುತ್ತದೆ.
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ಈ ಹಕ್ಕಿಗಳು ದಾಂಡೇಲಿ ಭಾಗದಲ್ಲಿ ಹೆಚ್ಚಾಗಿವೆ. ಅಲ್ಲದೆ ಜಿಲ್ಲೆಯ ವಿವಿಧೆಡೆಯೂ ಅಪರೂಪಕ್ಕೊಮ್ಮೆ ಗೋಚರಿಸುತ್ತವೆ. ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯುವ ಈ ಹಕ್ಕಿಗೆ ನಾಚಿಕೆ ಹೆಚ್ಚು. ಉದ್ದ ಕೊಕ್ಕು ಹೊಂದಿದ್ದು, ಗಾತ್ರದಲ್ಲಿಯೂ ದೊಡ್ಡದಾಗಿರುತ್ತವೆ. ಇಂತಹ ಹಕ್ಕಿ ಹೀಗೆ ಇವರೊಂದಿಗೆ ಒಡನಾಟ ಬೆಳೆಸಿರುವುದು ಅಚ್ಚರಿ ತರಿಸಿದೆ.
ಮನುಷ್ಯನನ್ನು ಕಂಡ್ರೆ ಹಾರಿ ಹೋಗುವ ಹಕ್ಕಿಯ ಗುಂಪಿಗೆ ಸೇರಿದ ಗ್ರೇಟ್ ಇಂಡಿಯನ್ ಹಾರ್ನ್ಬಿಲ್ ಈ ಕುಟುಂಬದವರೊಂದಿಗೆ ವಿಶೇಷ ಬಾಂಧವ್ಯ ಬೆಳಸಿಕೊಂಡಿರೋದು ಬಲು ರೋಚಕ.