ಕಾರವಾರ: ಉತ್ತರಾಖಂಡದಿಂದ ಆಗಮಿಸಿದ ಏಂಟು ಮಂದಿ ತಾಂತ್ರಿಕ ಸಿಬ್ಬಂದಿಯನ್ನು ಕ್ವಾರಂಟೈನ್ ನಡೆಸದೆ ಕಾರವಾರದ ಕೈಗಾ ಅಣುವಿದ್ಯುತ್ ಸ್ಥಾವರ ಪ್ರದೇಶದೊಳಗೆ ಸೇರಿಸಿಕೊಂಡಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಹೌದು, ಕೊರೊನಾ ಭೀತಿ ನಡುವೆಯೂ ದೂರದ ಉತ್ತರಾಖಂಡದ ಹರಿದ್ವಾರದಿಂದ ಎರಡು ವಾಹನದಲ್ಲಿ ಏಂಟು ಮಂದಿ ತಾಂತ್ರಿಕ ಸಿಬ್ಬಂದಿ ಕೈಗಾದ ಅಣು ವಿದ್ಯುತ್ ಸ್ಥಾವರವನ್ನು ಪ್ರವೇಶಿಸಿದ್ದಾರೆ. ಆದರೆ ಹತ್ತಾರು ರೆಡ್ ಝೋನ್ ಗಳನ್ನು ದಾಟಿ ಬಂದಿರುವ ಈ ಸಿಬ್ಬಂದಿಗೆ ಕೇವಲ ತಪಾಸಣೆ ಮಾತ್ರ ಮಾಡಿದ್ದಾರೆಯೇ ಹೊರತು, ಅವರನ್ನು ಕ್ವಾರಂಟೈನ್ ಮಾಡದೆ ಅಣು ವಿದ್ಯುತ್ ಸ್ಥಾವರದೊಳಗೆ ಬಿಟ್ಟುಕೊಳ್ಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರು ಪಕ್ಕದ ಜಿಲ್ಲೆಯಿಂದ ಆಗಮಿಸಿದರೂ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ಆದರೆ ಏಂಟು ಮಂದಿಯೂ ಹೊರ ರಾಜ್ಯಗಳಿಂದ ಆಗಮಿಸಿದ್ದು ಅವರನ್ನು ಕ್ವಾರಂಟೈನ್ ನಡೆಸುವಂತೆ ಟಾಸ್ಕ್ ಪೋರ್ಸ್ ಸಮಿತಿ ಒತ್ತಾಯಿಸಿದೆ. ಇಷ್ಟಾದರೂ ಜಿಲ್ಲಾಡಳಿತವಾಗಲಿ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ. ಅಣು ವಿದ್ಯುತ್ ಸ್ಥಾವರಗಳಲ್ಲಿ ಸ್ಥಳೀಯರು ವಿವಿಧ ಕೆಲಸ ಮಾಡುತ್ತಿದ್ದು ಕೊರೊನಾ ಹರಡುವ ಆತಂಕ ಇದೆ. ಇದೇ ಕಾರಣಕ್ಕೆ ಸ್ಥಳೀಯ ಮಲ್ಲಾಪುರ ಪಂಚಾಯಿತಿಯ 26 ಸದಸ್ಯರು ಇಂದು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿದ್ದು, ಪಿಡಿಓ ಮೂಲಕ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ನರೇಶ್ ಅಸ್ನೋಟಿಕರ್ ತಿಳಿಸಿದ್ರು.