ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಮೊಗೇರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.
2018ರಲ್ಲಿ ಹೊರಡಿಸಿದ್ದ ಸುತ್ತೋಲೆಯಿಂದ ಕೆಲವು ಗೊಂದಲ ಎದುರಾಗಿದ್ದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ. ಅಲ್ಲದೇ ರಾಷ್ಟ್ರಪತಿಗಳ ಅಧಿಸೂಚನೆಯಂತೆ ನೋಂದಣಿ 78ರಲ್ಲಿ ಉಲ್ಲೇಖವಾಗಿರುವ ಮೊಗೇರ ಜನಾಂಗಕ್ಕೆ ಎಸ್.ಸಿ ಪ್ರಮಾಣಪತ್ರ ನೀಡಲಾಗುವುದು. ಸ್ಥಳೀಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನೆ ಸಮಿತಿ ಅಥವಾ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಂತರ ಜಾತಿ ಪ್ರಮಾಣಪತ್ರ ವಿತರಿಸುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ರಾಜಶ್ರೀ ಎಚ್. ಕುಲಕರ್ಣಿ ಆದೇಶ ಹೊರಡಿಸಿದ್ದಾರೆ.
ಒಂದು ವೇಳೆ, ಸರ್ಕಾರದ ಈ ನಿರ್ದೇಶನ ಉಲ್ಲಂಘಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಳೆಯ ಸುತ್ತೋಲೆಯನ್ನು ವಾಪಸ್ ಪಡೆದು ಹೊಸ ಆದೇಶ ಹೊರಡಿಸಿರುವ ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು.
ಮೊಗೇರ ಜಾತಿ ಮೀಸಲಿನಲ್ಲಿ ತಾರತಮ್ಯವಾಗುತ್ತಿದ್ದು, ಕೆಲವರಿಗೆ ಎಸ್‌ಸಿ, ಇನ್ನು ಕೆಲವರಿಗೆ ಹಿಂದುಳಿದ ವರ್ಗದವರೆಂದು ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಉತ್ತರ ಕನ್ನಡ ಮೊಗೇರ ಸಮುದಾಯಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ಕೆಲವೆಡೆ ಎಸ್‌ಸಿ ಜಾತಿ ಪ್ರಮಾಣಪತ್ರ ನಕಲಿ ಎಂದು ಕೇಸ್ ದಾಖಲಿಸಲಾಗಿದ್ದು ಹಲವರು ತೊಂದರೆಗೆ ಒಳಗಾಗಿದ್ದರು. ಹೀಗಾಗಿ, ಸುತ್ತೋಲೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಸಂಬಂಧ ಇದ್ದ ಎಲ್ಲ ಕೇಸುಗಳು ವಜಾ ಆಗಿದ್ದು ಸಮಾಜದವರು ನಿಟ್ಟುಸಿರು ಬಿಡುವಂತಾಗಿದೆ.